ಕಾಲಕ್ಕೆ ತಕ್ಕಂತೆ ಅಪ್​ಡೇಟ್​ ಆದ್ರೆ ಎರಡುಪಟ್ಟು ಹಣ ಗಳಿಸಬಹುದು ಎನ್ನುವುದಕ್ಕೆ ಈ ಟ್ರಕ್​ ಡ್ರೈವರ್​ ಸಾಕ್ಷಿ!

Rajesh
Published on

ನವದೆಹಲಿ: ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಅನೇಕರು ಹೇಳುತ್ತಾರೆ. ಆ ಮಾತು ನಿಜವೆಂದು ಇದೀಗ ರಾಜೇಶ್ ರವಾನಿ ಎಂಬುವರು ಸಾಬೀತುಪಡಿಸಿದ್ದಾರೆ. ರಾಜೇಶ್ ಅವರು ಕಳೆದ 25 ವರ್ಷಗಳಿಂದ ಟ್ರಕ್ ಡ್ರೈವರ್ ಆಗಿದ್ದು, ಈಗ ಹಳ್ಳಿಗಾಡಿನ ಮತ್ತು ಸರಳ ಭಾಷೆಯಲ್ಲಿ ವ್ಲಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ.

ರಾಜೇಶ್​ ಅವರು ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಖಾತೆಯನ್ನು ತೆರೆದಿದ್ದು, ನಿರಂತರವಾಗಿ ವಿಡಿಯೋ ಅಪ್​ಲೋಡ್​​ ಮಾಡುವುದು ಅವರ ಕೆಲಸವಾಗಿದೆ. ದೇಶಾದ್ಯಂತ ಪ್ರವಾಸ ಮಾಡುವ ರಾಜೇಶ್​, ತಮ್ಮ ಟ್ರಕ್​ ಒಳಗೆ ವಿವಿಧ ಬಗೆಯ ಅಡುಗೆ ಮಾಡುತ್ತಾರೆ. ಟ್ರಕ್​ ಕೆಲಸ ಮತ್ತು ಅಡುಗೆ ಈ ಎರಡು ರಾಜೇಶ್​ ಅವರ ವಿಡಿಯೋದ ಕೇಂದ್ರ ಬಿಂದುವಾಗಿದೆ.

ತಮ್ಮ ವಿಡಿಯೋದಿಂದಲೇ ರಾಜೇಶ್ ತುಂಬಾ ಖ್ಯಾತಿಯನ್ನು ಗಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಸುಮಾರು 1.5 ಮಿಲಿಯನ್ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ರಾಜೇಶ್ ಇತ್ತೀಚೆಗಷ್ಟೇ ತನ್ನ ಸಂಪಾದನೆಯಲ್ಲಿ ಹೊಸ ಮನೆಯನ್ನು ಸಹ ಖರೀದಿಸಿದ್ದಾರೆ. ಈ ಸಂಗತಿಯನ್ನು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.

25 ವರ್ಷಗಳಿಂದ ಟ್ರಕ್ ಡ್ರೈವರ್ ಆಗಿರುವ ರಾಜೇಶ್ ರವಾನಿ, ತಮ್ಮ ಡ್ರೈವಿಂಗ್​ ವೃತ್ತಿಗೆ ಆಹಾರ ಮತ್ತು ಪ್ರಯಾಣದ ವ್ಲಾಗಿಂಗ್​ ಅನ್ನು ಸೇರಿಸಿದ್ದಾರೆ ಮತ್ತು ಈಗ ಯೂಟ್ಯೂಬ್‌ನಲ್ಲಿ 1.5 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ ಪ್ರಸಿದ್ಧರಾಗಿದ್ದಾರೆ. ತಮ್ಮ ಸಂಪಾದನೆಯಿಂದ ಹೊಸ ಮನೆಯನ್ನು ಖರೀದಿಸಿದ್ದಾರೆ ಎಂದು ಆನಂದ್​ ಮಹೀಂದ್ರಾ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದೀಗ ರಾಜೇಶ್ ಅವರ ಕತೆಯು ಸಾಕಷ್ಟು ಜನರಿಗೆ ಪ್ರೇರಣೆಯಾಗಿದೆ. ಏಕೆಂದರೆ ಟ್ರಕ್ ಡ್ರೈವರ್ ಕೆಲಸವನ್ನು ಸಾಧಾರವಾಗಿ ನೋಡುತ್ತಾರೆ. ಅಲ್ಲದೆ, ರಾಜೇಶ್​ ಅವರಿಗೆ ವಯಸ್ಸು ಸಹ ಆಗಿದೆ. ಆದರೆ, ವೃತ್ತಿ ಎಷ್ಟೇ ಸಾಧಾರಣವಾಗಿದ್ದರೂ, ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಮತ್ತು ನಿಮ್ಮನ್ನು ನೀವು ಮರುಶೋಧಿಸಲು ಎಂದಿಗೂ ಹಿಂದೇಟು ಹಾಕಬಾರದು ಎಂಬುದಕ್ಕೆ ರಾಜೇಶ್​ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net