

ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಸರ್ಕಾರದ ವರ್ಚಸ್ಸು ಇಮ್ಮಡಿಗೊಂಡಿದ್ದರೆ, ಎರಡು ಕ್ಷೇತ್ರಗಳ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್ಡಿಎ ಮೈತ್ರಿಪಕ್ಷಗಳು ಒಂದು ಕ್ಷೇತ್ರವನ್ನೂ ತಮ್ಮದಾಗಿಸಿಕೊಳ್ಳಲಾಗದೇ ತೀವ್ರ ಮುಖಭಂಗ ಅನುಭವಿಸಿವೆ. ಈ ಚುನಾವಣೆ ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ 2028ರ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭವೆಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿತ್ತು. ಆದ್ದರಿಂದಲೇ ಮತಗಳ ಧ್ರುವೀಕರಣಕ್ಕಾಗಿ ಮುಡಾ, ವಕ್ಪ್, ವಾಲ್ಮೀಕಿ, ಅಬಕಾರಿ ಹೀಗೆ ವಿವಿಧ ವಿಷಯಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ನಿರಂತರ ಹೋರಾಟ ರೂಪಿಸಿ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ ಪ್ರಯತ್ನಕ್ಕೆ ರಾಜ್ಯದ ಜನ ಮನ್ನಣೆ ನೀಡಿಲ್ಲ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ತೋರಿಸಲು ಹೋಗಿ ಪ್ರತಿಪಕ್ಷಗಳ ತಂತ್ರ ವಿಫಲವಾಗಿದೆ.
ಬಾಯಿಗೆ ಬೀಗ: ಈ ಫಲಿತಾಂಶ ಕೇವಲ ಪ್ರತಿಪಕ್ಷಗಳಿಗೆ ಮಾತ್ರವಲ್ಲ ಆಡಳಿತಾರೂಢ ಕಾಂಗ್ರೆಸ್ನಲ್ಲಿಯೂ ಹಲವರ ಬಾಯಿಗೆ ಬೀಗ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯ ಕುರಿತು ಆಡಳಿತ ಪಕ್ಷದಲ್ಲಿ ಚರ್ಚೆಗಳು ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದವು. ಅಂತಹ ಚರ್ಚೆಗಳಿಗೆ ಈಗ ಬೀಗ ಬಿದ್ದಿದೆ.
ವಕ್ಪ್ ಹೋರಾಟಕ್ಕೆ ಸಿಗದ ಬೆಲೆ: ವಕ್ಪ್ ವಿಚಾರದಲ್ಲಿ ಬಿಜೆಪಿ ನಿರಂತರ ಹೋರಾಟ ನಡೆಸಿತು. ಹಿಂದು ಮತಗಳನ್ನು ಕ್ರೋಡೀಕರಿಸುವುದು ಬಿಜೆಪಿಯ ಉದ್ದೇಶವಾಗಿತ್ತು. ಆದರೆ ಬಿಜೆಪಿಯ ಹೋರಾಟ ಜನರನ್ನು ತಲುಪುವಲ್ಲಿ ವಿಫಲವಾಗಿದೆ. ಮುಡಾ ನಿವೇಶನ ವಿಚಾರದಲ್ಲಿ ಬೆಂಗಳೂರಿನಿಂದ ಮೈಸೂರಿನ ತನಕ ನಡೆದ ಪಾದಯಾತ್ರೆಯ ಹಿಂದೆ ಚನ್ನಪಟ್ಟಣ ಉಪ ಚುನಾವಣೆ ವಿಷಯವೂ ಅಡಗಿತ್ತು. ಆದರೆ ಹಳೆಯ ಮೈಸೂರು ಭಾಗದ ಈ ಕ್ಷೇತ್ರದಲ್ಲಿಯೇ ಕಾಂಗ್ರೆಸ್ಗೆ ಭರ್ಜರಿ ಗೆಲುವು ಸಿಕ್ಕಿರುವುದು ಆರೋಪಗಳಿಗೆ ಜನರ ಬೆಂಬಲವಿಲ್ಲವೆಂದೇ ಹೇಳಲಾಗುತ್ತಿದೆ.
ಮೈತ್ರಿಯಲ್ಲಿ ಕಾಣದ ಒಗ್ಗಟ್ಟು: ಕಾಂಗ್ರೆಸ್ ವಿರುದ್ಧ ಮಿತ್ರಪಕ್ಷಗಳು ಒಗ್ಗಟ್ಟಿನ ಹೋರಾಟ ನಡೆಸುವಲ್ಲಿಯೂ ಸೋತಿವೆ. ಕಾಂಗ್ರೆಸ್ನಲ್ಲಿ ನಾಯಕರ ನಡುವೆ ಒಗ್ಗಟ್ಟು ಕಂಡರೆ ಮಿತ್ರಪಕ್ಷಗಳಲ್ಲಿ ತಾಳಮೇಳ ಇರಲಿಲ್ಲ. ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಜೆಡಿಎಸ್ ಹಾಗೂ ಚನ್ನಪಟ್ಟಣದಲ್ಲಿ ಬಿಜೆಪಿ ಎನ್ಡಿಎ ಅಭ್ಯರ್ಥಿಗಳ ಪರ ಸರಿಯಾದ ಕಾರ್ಯತಂತ್ರವನ್ನೇ ರೂಪಿಸಲಿಲ್ಲ. ಚನ್ನಪಟ್ಟಣಕ್ಕೆ ಬಿಜೆಪಿ ನಾಯಕರು ಕಾಟಾಚಾರಕ್ಕೆ ಪ್ರಚಾರಕ್ಕೆ ಹೋಗಿ ಬಂದರು. ವಿರೋಧ ಪಕ್ಷದ ಸರ್ಕಾರ ಇರುವಾಗ ಕೂತು ಚರ್ಚೆ ಮಾಡಿ ಏಟಿಗೆ ಎದಿರೇಟು ನೀಡುವಂತಹ ತಂತ್ರಗಳನ್ನು ರೂಪಿಸಬೇಕಾಗಿತ್ತು. ಆ ಪ್ರಯತ್ನದಲ್ಲಿ ಎರಡೂ ಪಕ್ಷಗಳು ವಿಫಲವಾಗಿರುವುದನ್ನು ಫಲಿತಾಂಶವೇ ತೋರಿಸುತ್ತಿದೆ.
ಹಿಂದುಳಿದ ವರ್ಗಗಳ ಬೆಂಬಲ: ಮೂರು ಕ್ಷೇತ್ರಗಳಲ್ಲಿಯೂ ಅಹಿಂದ ಮತದಾರರು ಕಾಂಗ್ರೆಸ್ ಪಕ್ಷದಿಂದ ದೂರವಾಗಿಲ್ಲವೆಂಬುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಮೂರು ಕ್ಷೇತ್ರಗಳು ಸಹ ಅಹಿಂದ ಮತದಾರರೇ ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳು. ಚನ್ನಪಟ್ಟಣದಲ್ಲಿ ಒಕ್ಕಲಿಗರು ಒಂದು ಲಕ್ಷಕ್ಕೂ ಹೆಚ್ಚಿದ್ದರೂ ಸಹ, ಮುಸ್ಲಿಂ, ದಲಿತ, ಕುರುಬ, ತಿಗಳ, ಬಲಿಜ, ಮಡಿವಾಳ ಹೀಗೆ ಅಹಿಂದ ಮತಗಳು ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿವೆ. ಅದೇ ರೀತಿಯಲ್ಲಿ ಶಿಗ್ಗಾಂವಿಯಲ್ಲಿ ಮುಸ್ಲಿಂ ಹಾಗೂ ಕುರುಬ ಸೇರಿದರೆ 1.30 ಲಕ್ಷದಟ್ಟಿವೆ. ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳು ಇಲ್ಲಿವೆ. ಸಂಡೂರಿನಲ್ಲಿ 70 ಸಾವಿರಕ್ಕೂ ಹೆಚ್ಚು ಎಸ್ಟಿ ಮತದಾರರು ಇದ್ದಾರೆ. ಕುರುಬ, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳು ಗಣನೀಯ ಪ್ರಮಾಣದಲ್ಲಿದ್ದಾರೆ. ಎಲ್ಲ ಅಹಿಂದ ವರ್ಗಗಳು ಕಾಂಗ್ರೆಸ್ಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿರುವುದು ಕಂಡು ಬರುತ್ತದೆ. ಅದರಲ್ಲೂ ಮುಸ್ಲಿಂ ಮತ್ತು ಕುರುಬರ ಮತಗಳು ಚದುರಿಲ್ಲ. ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಷಡ್ಯಂತ್ರ ಅಹಿಂದ ವರ್ಗಗಳನ್ನು ಒಗ್ಗೂಡಿಸಿದೆ. ಇದು ಕೇವಲ ಪ್ರತಿಪಕ್ಷಗಳಿಗೆ ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡ್ಗೂ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿರುವುದು ಸುಳ್ಳೇನು ಅಲ್ಲ.
ವಿಧಾನಸಭೆಯಲ್ಲಿ ಹೆಚ್ಚಿದ ಬಲ: ಉಪ ಚುನಾವಣೆಯ ಫಲಿತಾಂಶದಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ಗಳು ಕುಸಿತ ಕಂಡಿವೆ. ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಪಡೆದಿದ್ದ ಕಾಂಗ್ರೆಸ್ ಬಲ ಈಗ 137ಕ್ಕೆ ಏರಿಕೆಯಾಗಿದೆ. ಬಿಜೆಪಿ 66 ರಿಂದ 65ಕ್ಕೆ ಹಾಗೂ ಮಿತ್ರ ಪಕ್ಷ ಜೆಡಿಎಸ್ 19 ರಿಂದ 18ಕ್ಕೆ ಇಳಿದಿವೆ.ಉಳಿದಂತೆ ಕೆಆರ್ಪಿಪಿ, ಎಸ್ಕೆಪಿ ತಲಾ ಒಂದು ಸ್ಥಾನ ಹಾಗೂ ಪಕ್ಷೇತರರು ಇಬ್ಬರು ಇದ್ದಾರೆ.
ಪ್ರಿಯಾಂಕಾ ಅಭಿನಂದನೆ: ಉಪಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿರುವುದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಯನಾಡಿನಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕಾ ಅವರಿಗೆ ಅಭಿನಂದನೆ ಸಲ್ಲಿಸಲು ದೂರವಾಣಿ ಕರೆ ಮಾಡಿದಾಗ ಅಭಿನಂದನೆ ಸಲ್ಲಿಸಿ, ಉತ್ತಮ ಆಡಳಿತದ ಕಡೆ ಗಮನ ಹರಿಸಿ ಎಂದು ಹೇಳಿದರು.
ಒಳಜಗಳಕ್ಕೆ ಬೆಲೆತೆತ್ತ ಕಮಲಪಡೆ: ಉಪ ಚುನಾವಣೆಯಲ್ಲಿ ಗೆದ್ದು ಬೀಗುವ ತವಕದಲ್ಲಿದ್ದ ಬಿಜೆಪಿ, ತನ್ನದೇ ಪಕ್ಷದ ಒಳಜಗಳಕ್ಕೆ ಭಾರಿ ಬೆಲೆ ತೆತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದ ಕಮಲ ಪಡೆ, ಉಪ ಚುನಾವಣೆಯಲ್ಲಿ ಆಂತರಿಕ ಸಮಸ್ಯೆಗಳಿಂದ ಮಕಾಡೆ ಮಲಗಿದೆ. ಚುನಾವಣೆಯುದ್ದಕ್ಕೂ ತಾಳಮೇಳವಿಲ್ಲದೆ ಸಾಗಿದ ಪ್ರಚಾರವೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತೊಡಕಾಗಿದೆ. ಬಿಜೆಪಿಯೊಳಗಿನ ಆಂತರಿಕ ಸಮಸ್ಯೆ ಬದಿಗಿಟ್ಟು, ಒಗ್ಗಟ್ಟಿನಿಂದ ಪ್ರಚಾರ ಮಾಡಿದ್ದರೆ ಬಹುಶಃ ಇಷ್ಟೊಂದು ದುಸ್ಥಿತಿ ಬರುತ್ತಿರಲಿಲ್ಲ. ಕನಿಷ್ಠ ಒಂದು ಕ್ಷೇತ್ರವನ್ನಾದರೂ ಗೆಲ್ಲುವ ಸಾಧ್ಯತೆ ಇತ್ತು. ನಿರ್ಣಾಯಕ ಹಂತದಲ್ಲಿ ಕಮಲ ಪಡೆ ಎಲ್ಲವನ್ನೂ ಕೈ ಚೆಲ್ಲಿದೆ. ಹಾಗೆಯೇ ಕೆಲ ಹಿರಿಯ ನಾಯಕರ ಬಹಿರಂಗ ಮಾತುಗಳೂ ಪಕ್ಷಕ್ಕೆ ಹೊರೆಯಾಗಿರುವುದನ್ನು ಅಲ್ಲಗಳೆಯಲಾಗದು. ವಿಜಯೇಂದ್ರ ನಾಯಕತ್ವಕ್ಕೆ ಸಡ್ಡು ಹೊಡೆಯಲು ಹೊರಟ ಕೆಲ ಹಿರಿಯರು ಸೋಲಿನಲ್ಲಿಯೂ ಮಹತ್ವದ ಪಾತ್ರವಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ವಿಜಯೇಂದ್ರ ಅವರಿಗೆ ಇನ್ನಷ್ಟು ವೈರಿಗಳನ್ನು ಹೆಚ್ಚಿಸಿದರೂ ಅಚ್ಚರಿ ಇಲ್ಲ. ಭವಿಷ್ಯದ ರಾಜಕಾರಣಕ್ಕಾಗಿ ಒಬ್ಬರ ಕಾಲನ್ನು ಒಬ್ಬರು ಎಳೆಯುವ ಆ ಕ್ಷಣದ ಆವೇಶದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮುಳುಗಿಸಿದ್ದು ಮಾತ್ರ ಸತ್ಯ. ಈಗಲಾದರೂ ಈ ಬೆಳವಣಿಗೆ ವರಿಷ್ಠರ ಕಣ್ಣು ತೆರೆಸುತ್ತದೆಯೇ ಕಾದು ನೋಡಬೇಕು.
ಫಲಿಸಿದ ಜಮೀರ್ ಅಹಮದ್ ಪ್ರಯತ್ನ: ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಸತಿ ಸಚಿವ ಜಮೀರ್ ಅಹಮದ್ ನಡೆಸಿದ ಪ್ರಯತ್ನ ಗಮನಾರ್ಹವಾಗಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಾಗ ಇದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಚನ್ನಪಟ್ಟಣದಲ್ಲಿ ಜಮೀರ್ ಆಡಿದ ಮಾತು ಕಾಂಗ್ರೆಸ್ ಪಾಲಿಗೆ ದುಬಾರಿ ಎಂದೇ ಕೇಳಿ ಬಂದವು. ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿರುವ ಅಲ್ಪಸಂಖ್ಯಾತ ಮತಗಳು ಚದುರದಂತೆ ಕಾರ್ಯತಂತ್ರವನ್ನು ರೂಪಿಸುವಲ್ಲಿ ಜಮೀರ್ ಯಶಸ್ವಿಯಾದರೆಂಬುದು ಪಕ್ಷದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.
ಮಾಜಿ ಸಿಎಂಗಳ ಮಕ್ಕಳಿಗೆ ಸಿಕ್ಕದ ಗೆಲುವು: ಉಪ ಚುನಾವಣೆಯಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳಿಗೆ ಅದೃಷ್ಟ ಕೈ ಕೊಟ್ಟಿದ್ದರೆ, ಸಂಸದರ ಪತ್ನಿಗೆ ಗೆಲುವು ತಂದುಕೊಟ್ಟಿದೆ. ಆ ಮೂಲಕ ಕುಟುಂಬ ರಾಜಕಾರಣಕ್ಕೆ ಮಿಶ್ರ ಫಲ ನೀಡಿದೆ. ಚನ್ನಪಟ್ಟಣದಲ್ಲಿ ಸೋಲು ಅನುಭವಿಸಿದ ನಿಖಿಲ್ ಕುಮಾರಸ್ವಾಮಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಯನ್ನು ಉತ್ತರಾಧಿಕಾರಿಯನ್ನಾಗಿ ನೋಡಲು ಕ್ಷೇತ್ರದ ಮತದಾರರು ಒಪ್ಪಿಕೊಂಡಿಲ್ಲ.
ಉಪ ಚುನಾವಣೆಯಲ್ಲಿ ಜನ ಆಡಳಿತಾರೂಢ ಪಕ್ಷಕ್ಕೆ ಜೈಕಾರ ಹಾಕುವುದು ಸಹಜ. ಹಣ, ಹೆಂಡ ಮತ್ತು ಸರ್ಕಾರಿ ಯಂತ್ರಗಳ ಅವ್ಯಾಹತ ಬಳಕೆ ಈ ಫಲಿತಾಂಶಕ್ಕೆ ಕಾರಣ. ಉಪ ಚುನಾವಣೆ ಸೋಲಿನ ಬಗ್ಗೆ ಪಕ್ಷದ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ನವರು ಮಿತಿಮೀರಿ ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದ್ದಾರೆ. ಸರ್ಕಾರಿ ಯಂತ್ರ, ಹಣದಿಂದ ಕಾಂಗ್ರೆಸ್ನವರು ಶಿಗ್ಗಾಂವಿ ಸೇರಿದಂತೆ ಮೂರೂ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಆದರೂ ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣಗೆ ಅಭಿನಂದನೆ ಸಲ್ಲಿಸುತ್ತೇನೆ.
| ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ, ಸಂಸದ
ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆ ಗಳು ಮತ್ತು ಕಾರ್ಯ ಕರ್ತರ ಶ್ರಮ ದಿಂದಲೇ ವಿಧಾನ ಸಭಾ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಯಿತು.
| ಸತೀಶ್ ಜಾರಕಿಹೊಳಿ ಸಚಿವ