'ನಾನು ರಾಮಾಯಾಣ ನೋಡುತ್ತಿದ್ದೇನೆ...ನೀವು?' ಎಂದು ಟ್ವಿಟರ್​​ನಲ್ಲಿ ಪ್ರಶ್ನಿಸಿದ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಕೆಲವೇ ಕ್ಷಣದಲ್ಲಿ ಪೋಸ್ಟ್ ಡಿಲೀಟ್​ ಮಾಡಿದ್ದೇಕೆ?

Prakash Javadekar
Prakash Javadekar
Published on

ನವದೆಹಲಿ: ಕಳೆದ 30 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿ ಇಂದಿನಿಂದ ಮತ್ತೆ ಡಿಡಿ ನ್ಯಾಷನಲ್​​ನಲ್ಲಿ ಪ್ರಸಾರವಾಗುತ್ತಿದೆ.

ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೋಟ್ಯಂತರ ಜನರಿಗೆ ಮನೆ ಬಿಟ್ಟು ಹೋಗದ ಸ್ಥಿತಿ ಎದುರಾಗಿದೆ. ಅಂತಹವರಿಗೆ ಮನರಂಜನೆ ನೀಡುವ ಉದ್ದೇಶದಿಂದ ಧಾರಾವಾಹಿಗಳನ್ನು ಡಿಡಿ ನ್ಯಾಷನಲ್​​ನಲ್ಲಿ ಮರುಪ್ರಸಾರ ಮಾಡಲಾಗುತ್ತಿದೆ. ಬೆಳಗ್ಗೆ 9ಕ್ಕೆ ರಾಮಾಯಣ ಮತ್ತು ಸಂಜೆ 7ಗಂಟೆಗೆ ಮಹಾಭಾರತ ಧಾರಾವಾಹಿ ಪ್ರಸಾರವಾಗಲಿದೆ. ಈ ಬಗ್ಗೆ ಶುಕ್ರವಾರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್​ ಜಾವಡೇಕರ್​ ಟ್ವೀಟ್​ ಮಾಡಿ ತಿಳಿಸಿದ್ದರು.

ಆದರೆ ಶನಿವಾರ ಕೇಂದ್ರ ಸಚಿವರು ಶನಿವಾರ ಟ್ವೀಟ್​ವೊಂದನ್ನು ಮಾಡಿ, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬಳಿಕ ಆ ಟ್ವಿಟರ್​ ಪೋಸ್ಟ್​ನ್ನು ಅವರು ಡಿಲೀಟ್​ ಮಾಡಿದ್ದಾರೆ.

ಇಂದು ಬೆಳಗ್ಗೆ 9.41ರ ಹೊತ್ತಿಗೆ ಜಾವಡೇಕರ್​ ಒಂದು ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು. ತಾವು ಡಿಡಿ ನ್ಯಾಷನಲ್​ ಪ್ರಸಾರವಾಗುತ್ತಿದ್ದ ರಾಮಾಯಣ ಪೌರಾಣಿಕ ಧಾರಾವಾಹಿಯನ್ನು ನೋಡುತ್ತಿರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ನಾನು ರಾಮಾಯಣ ವೀಕ್ಷಿಸುತ್ತಿದ್ದೇನೆ...ನೀವು? ಎಂದು ಕ್ಯಾಪ್ಷನ್​ ಹಾಕಿದ್ದರು.

ಆದರೆ ಅವರ ಪೋಸ್ಟ್​ಗೆ ಬಹುತೇಕ ನೆಗೆಟಿವ್​ ಕಾಮೆಂಟ್​ಗಳೇ ಬಂದಿವೆ. ಅನೇಕರು ಆ ಟ್ವೀಟ್​ನ ರೀಟ್ವೀಟ್ ಮಾಡಿಕೊಂಡು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಎಲ್ಲೆಲ್ಲೂ ಲಾಕ್​ಡೌನ್​ ಇದೆ. ಅದೆಷ್ಟೋ ಜನರಿಗೆ ಊಟ-ತಿಂಡಿ ಸಿಗುತ್ತಿಲ್ಲ, ನೀವು ರಾಮಾಯಣ, ಮಹಾಭಾರತ ನೋಡಿಕೊಂಡು ಕಾಲಕಳೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಪ್ರಕಾಶ್​ ಜಾವಡೇಕರ್​ ಟ್ವೀಟ್​ಗೆ ಪ್ರತಿಯಾಗಿ ವಲಸಿಗರು ರಾತ್ರೋರಾತ್ರಿ ನಡೆದುಕೊಂಡೇ ಒಂದು ಸ್ಥಳದಿಂದ, ಇನ್ನೊಂದು ಸ್ಥಳಕ್ಕೆ ಹೋಗುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ ಟ್ವಿಟರ್ ಬಳಕೆದಾರನೋರ್ವ..ಸಚಿವರೇ ನಾವು ಈ ರಾಮಾಯಣವನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೀಗೆ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಪ್ರಕಾಶ್​ ಜಾವ್ಡೇಕರ್​ ತಮ್ಮ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಟ್ವೀಟ್​ ಮಾಡಿ, ತಾವು ಮನೆಯಿಂದಲೇ ಕೆಲಸ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಪಟ್ಟಂತೆ ನನ್ನ ಇಲಾಖೆಯ ಕಾರ್ಯಗಳನ್ನು ಮನೆಯಲ್ಲೇ ಕುಳಿತು ಮಾಡುತ್ತಿದ್ದೇನೆ, ಅಧಿಕಾರಿಗಳೊಂದಿಗೆ ಫೋನ್​ನಲ್ಲಿ ಕೋ ಆರ್ಡಿನೇಟ್​ ಮಾಡುತ್ತಿದ್ದೇನೆ. ನನಗೀಗ ಮನೆಯೇ ಕಚೇರಿಯಾಗಿದೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net