ರೆವಿನ್ಯೂ ಸೈಟ್ ಕೊಂಡವರು ತ್ರಿಶಂಕು

kaveri portal
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಕಂದಾಯ ಬಡಾವಣೆಗಳಿಗೆ ಕಡಿವಾಣ ಹಾಕುವ ಬದಲು ಸ್ಥಿರಾಸ್ತಿ ನೋಂದಣಿಗೆ ಏಕಾಏಕಿ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಜನಸಾಮಾನ್ಯರಿಗಷ್ಟೇ ಅಲ್ಲ, ಸರ್ಕಾರದ ಬೊಕ್ಕಸದ ಮೇಲೂ ಗ್ರಹಣ ಕವಿಯುವಂತಾಗಿದೆ. ಸಾಲ ಮಾಡಿ ರೆವಿನ್ಯೂ ಸೈಟ್ ಖರೀದಿಸಿದ್ದವರಿಗೆ ಇ-ಖಾತೆ ಸಿಗದ ಪರಿಣಾಮ ಬ್ಯಾಂಕ್ ಲೋನ್ ಸಿಗದೆ ಮನೆ ಕಟ್ಟಲಾಗುತ್ತಿಲ್ಲ. ಮಾರಿ ಕೈತೊಳೆದುಕೊಳ್ಳೋಣ ಅಂದರೆ ಅದೂ ಕೂಡ ಸಾಧ್ಯವಾಗುತ್ತಿಲ್ಲ. ಇದು ಜನರ ಬದುಕಾದರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 69 ಸಾವಿರ ದಸ್ತಾವೇಜು ನೋಂದಣಿ ಕಡಿಮೆ ಆಗಿ, ಆದಾಯ ಕೂಡ 2,067 ಕೋಟಿ ರೂ. ಇಳಿಕೆಯಾಗಿರುವುದು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೇಲೆ ಪರಿಣಾಮ ಬೀರುವ ಆತಂಕ ಮೂಡಿಸಿದೆ.

ತಪ್ಪು ಯಾರದ್ದು?: ಬಿಬಿಎಂಪಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಕೇಂದ್ರಗಳ ಸನಿಹದಲ್ಲಿ ವರ್ಷಗಳಿಂದ ರೆವಿನ್ಯೂ ಲೇಔಟ್‌ಗಳು ನಿರ್ಮಾಣವಾಗಿವೆ. ಅಕ್ರಮ ಬಡಾವಣೆಗೆ ಕಡಿವಾಣ ಹಾಕುವ ಜತೆಗೆ ಬಿಲ್ಡರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆದೇಶವಿದೆ. ಆದರೂ, ಕಂದಾಯ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಉಪನೋಂದಣಿ ಕಚೇರಿಯಲ್ಲಿ ರೆವಿನ್ಯೂ ಸೈಟ್‌ಗಳ ನೋಂದಣಿಗೆ ಅವಕಾಶ ಮಾಡಿಕೊಟ್ಟು ಸಾವಿರಾರು ಕೋಟಿ ರೂ. ಆದಾಯ ಸಂಗ್ರಹಿಸಿತು. ಬಿಡಿಎ, ಕೆಎಚ್‌ಬಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳಲ್ಲಿ ದುಬಾರಿ ಬೆಲೆ ಕೊಟ್ಟು ಸೈಟ್ ಖರೀದಿಸಲು ಸಾಧ್ಯವಾಗದ ಬಡ ಮತ್ತು ಮಧ್ಯಮ ವರ್ಗದವರು ರೆವಿನ್ಯೂ ಸೈಟ್‌ಗಳತ್ತ ಮುಖ ಮಾಡಿದರು.

ಹೂಡಿಕೆದಾರರು ತತ್ತರ: ಇವರಿಗೆ ಆಧಾರವಾಗಿ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಸಹಕಾರ ಸಂಘಗಳು ಕೈಬರಹ ಖಾತಾ ಮತ್ತು ಅರ್ಜಿದಾರರ ಆದಾಯದ ಮೂಲದ ಮೇಲೆ ಸಾಲ ಕೊಟ್ಟು ಕೈಜೋಡಿಸಿವು. ಇದರಿಂದ ವಾಸಕ್ಕೆ ಮನೆ ನಿರ್ಮಾಣ ಮಾಡಿಕೊಂಡರೆ ನಿರ್ಮಾಣ ಕ್ಷೇತ್ರ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಹಣದ ವ್ಯವಹಾರ ನಡೆದು ಆದಾಯ ವೃದ್ಧಿ ಆಯಿತು. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಪ್ರೋತ್ಸಾಹ ಲಭಿಸಿತು. ಆದರೆ, ಅಕ್ಟೋಬರ್‌ನಿಂದ ಇ-ಖಾತಾ ಕಡ್ಡಾಯದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ರೆವಿನ್ಯೂ ಸೈಟ್‌ಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏನೆಲ್ಲ ಸಮಸ್ಯೆ ಸೃಷ್ಟಿ?

* ಇ ಖಾತೆ ಇಲ್ಲದೆ ಹಲವು ಸಮಸ್ಯೆ

* ಮನೆ ಕಟ್ಟುವುದಕ್ಕೆ ಸಾಲ ಸಿಗುತ್ತಿಲ್ಲ

* ಮಕ್ಕಳ ಮದುವೆ, ಶಿಕ್ಷಣಕ್ಕೂ ಕಷ್ಟ

* ಸೈಟ್ ಮಾರುವುದಕ್ಕೂ ಸಮಸ್ಯೆ

* ಸಾಲಕ್ಕೆ ಲೇವಾದೇವಿದಾರರ ಮೊರೆ

* ನಿವೇಶನ ಪತ್ರ ಅಡವಿಡುವ ಸಂಕಷ್ಟ

* ಬಿಲ್ಡರ್‌ಗಳಿಗೂ ಆರ್ಥಿಕ ಸಮಸ್ಯೆ

* ಸೈಟ್ ಮಾರಲಾಗದೆ ಕಂಗಾಲು

* ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪೆಟ್ಟು

ಗ್ರಾಪಂ ಸೈಟ್‌ಗೂ ಏಕಿಲ್ಲ?

ಬಿಬಿಎಂಪಿ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರೆವಿನ್ಯೂ ಸೈಟ್ ಮತ್ತು ಅಕ್ರಮ ಕಟ್ಟಡಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಬಿ-ಖಾತಾ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಗ್ರಾ.ಪಂ.ವ್ಯಾಪ್ತಿಯ ರೆವಿನ್ಯೂ ಸೈಟ್ ಮತ್ತು ಅಕ್ರಮ ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಬಿ-ಖಾತಾ ನೀಡುವುದು ಚರ್ಚೆಯಲ್ಲಿಯೇ ಉಳಿದಿದೆ. ಗ್ರಾಪಂ ವ್ಯಾಪ್ತಿಯಲ್ಲಿ 90 ಲಕ್ಷ ಆಸ್ತಿಗಳು ಇರುವುದಾಗಿ ಅಂದಾಜು ಮಾಡಲಾಗಿದೆ. ಪ್ರಸ್ತುತ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಿರುವ ರೆವಿನ್ಯೂ ಸೈಟ್‌ಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ 11ಬಿ ಅನ್ವಯ ಇ-ಖಾತಾ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ರಾಜಸ್ವ ಕುಸಿತಕ್ಕೆ ಕಾರಣ?

ಕಂದಾಯ ಇಲಾಖೆ ಪೂರ್ವ ಸಿದ್ಧತೆ ಇಲ್ಲದೆ ಮತ್ತು ಇತರ ಇಲಾಖೆಯೊಂದಿಗೆ ಸಮನ್ವಯತೆ ಇಲ್ಲದೆ ಏಕಾಏಕಿ ಇ-ಖಾತಾ ಕಡ್ಡಾಯ ಮಾಡಿದೆ. ಇದರಿಂದ ಇ-ಸ್ವತ್ತು, ಇ-ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ ನೀಡುವಲ್ಲಿ ಗೊಂದಲ ಉಂಟಾಗಿ ಅಧಿಕಾರಿಗಳ ವರ್ಗದಲ್ಲಿ ವಿಳಂಬವಾಗುತ್ತಿದೆ. ರೆವಿನ್ಯೂ ಲೇಔಟ್‌ಗಳಿಗೆ ಕಡಿವಾಣ ಹಾಕದೆ ರಿಜಿಸ್ಟ್ರೇಷನ್‌ಗೆ ಅವಕಾಶ ಕೊಟ್ಟು ದಿಢೀರ್ ನಿಲ್ಲಿಸಿದ ಪರಿಣಾಮ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆದಾಯ ಇಳಿಕೆಯಾಗುತ್ತಿದೆ. ಇ-ಖಾತಾ ಪಡೆದರೂ ಕಾವೇರಿ 2.0ನಲ್ಲಿ ಲಿಂಕ್ ಆಗದೆ ರಿಜಿಸ್ಟ್ರೇಷನ್‌ಗೆ ತೊಂದರೆ ಒಂದು ಕಡೆಯಾದರೆ ಖಾತಾದಲ್ಲಿ ಹೆಸರು, ಚಕ್ಕುಬಂದಿ, ವಾರ್ಡ್, ವಿಸ್ತೀರ್ಣದಲ್ಲಿ ತಪ್ಪುಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್‌ಗಳಿಗೆ ಬಿ-ಖಾತಾ ಕೊಡದೆ ಇರುವುದು ಪ್ರಮುಖ ಕಾರಣವಾಗಿದೆ.

4 ಸಾವಿರ ಕೋಟಿ ರೂ. ಖೋತಾ?

2024-25ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 26 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಕ್ಕೆ ಗುರಿ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ 18,388 ಕೋಟಿ ರೂ. ಸಂಗ್ರಹ ಆಗಬೇಕಿತ್ತು. ಆದರೆ, 16,416 ಕೋಟಿ ರೂ.ಗೆ ನಿಂತಿದೆ. ಏಪ್ರಿಲ್‌ನಿಂದ ಜುಲೈವರೆಗೂ ಟಾರ್ಗೆಟ್ ಮುಟ್ಟುವಲ್ಲಿ ಸುಸ್ಥಿತಿಯಲ್ಲಿದ್ದ ಇಲಾಖೆ ಆಗಸ್ಟ್ ಆನಂತರ ಡಿಸೆಂಬರ್‌ವರೆಗೂ 187 ಕೋಟಿ, 530, 492, 611 ಮತ್ತು 1,013 ಕೋಟಿ ರೂ. ಕ್ರಮವಾಗಿ ರಾಜಸ್ವ ಸಂಗ್ರಹ ಇಳಿಕೆಯಾಗಿದೆ. ಹೀಗೆ ಮುಂದುವರಿದರೆ 22 ಸಾವಿರ ಕೋಟಿ ರೂ.ಗೆ ತಲುಪಬಹುದು ಎಂದು ಇಲಾಖೆ ಅಂದಾಜಿಸಿದೆ.

2024-25(ಏ-ಡಿ) ಅಂಕಿ-ಅಂಶ ರೂಪಾಯಿಗಳಲ್ಲಿ

-------------------------------------------------------

ತಿಂಗಳು/ದಸ್ತಾವೇಜು ನೋಂದಣಿ/ಗುರಿ/ರಾಜಸ್ವ ಸಂಗ್ರಹ/ ಏರಿಕೆ-ಇಳಿಕೆ

ಏಪ್ರಿಲ್/ 1,73,803  / 1,631   /1,709   / 78

ಮೇ  / 2,03,627    /1,612   / 2,027   / 415

ಜೂನ್ / 2,04,923  / 1,787  /1,899   /112

ಜುಲೈ /2,21,585   /1,770    /2,027   /257

ಆಗಸ್ಟ್  /2,30,799  /2,409  /2,221  /-187

ಸೆಪ್ಟೆಂಬರ್ /2,01,606  /2,635  /2,104  /-530

ಅಕ್ಟೋಬರ್ / 1,77,158  /2,382  /1,889  /-492

ನವೆಂಬರ್  /1,62,966   /1,877   /1,265  /-611

ಡಿಸೆಂಬರ್ /1,51,821   /2,285   /1,271   /-1013

============================================

ಒಟ್ಟು  17,28,288   /18,388  /16,416    /-1971

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net