ನರ್ಸ್​ ಬದಲು ತಾನೇ ಲಸಿಕೆ ಕೊಟ್ಟ ಕೌನ್ಸಿಲರ್! ಟಿಎಂಸಿ ನಾಯಕರ ನಡೆಗೆ ಬಿಜೆಪಿ ಗರಂ

aaa
Published on

ಕೋಲ್ಕತ: ಲಸಿಕೆ ಕೊಡುವುದು ಸಣ್ಣ ಕೆಲಸವಾದರೂ ಅದನ್ನು ಅನುಭವವಿಲ್ಲದವರು ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕೌನ್ಸಿಲರ್ ಒಬ್ಬರು ತಾವೇ ಬಂದು ಮಹಿಳೆಯೊಬ್ಬಳಿಗೆ ಕರೊನಾ ಲಸಿಕೆ ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.


ರಾಜ್ಯದ ಕುಲತಿ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಅಲ್ಲಿನ ಟಿಎಂಸಿ ಕೌನ್ಸಿಲರ್ ಆಗಿರುವ ತಬಸ್ಸುಮ್ ಅರಾ ಕರೊನಾ ಲಸಿಕಾ ಕೇಂದ್ರಕ್ಕೆ ಬರುತ್ತಾರೆ. ಅಲ್ಲಿ ನರ್ಸ್​ ಬಳಿ ಬಂದು ಅವರ ಕೈಲಿದ್ದ ಸಿರಿಂಜ್ ಪಡೆದು, ಲಸಿಕೆ ಸ್ವೀಕರಿಸಲು ಕುಳಿತಿದ್ದ ಮಹಿಳೆಗೆ ತಾವೇ ಲಸಿಕೆ ಕೊಡುತ್ತಾರೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ಚಿತ್ರೀಕರಣವಾಗಿದೆ. ಈ ವಿಡಿಯೋವನ್ನು ಬಿಜೆಪಿಯ ಅನೇಕ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದು, ಟಿಎಂಸಿ ಪಕ್ಷಕ್ಕೆ ಅದರ ನಾಯಕರ ಮೇಲೆ ಹಿಡಿತವಿಲ್ಲವೇ ಎಂದು ಪ್ರಶ್ನಿಸುತ್ತಿದೆ. ಈ ರೀತಿ ಅನುಭವವಿಲ್ಲದವರು ಲಸಿಕೆ ಕೊಟ್ಟರೆ ಅದನ್ನು ಸ್ವೀಕರಿಸಿದವರ ಕಥೆ ಏನಾಗಬೇಕು ಎಂದು ಕೇಳಲಾರಂಭಿಸಿದೆ.


ಆದರೆ ಈ ಆರೋಪವನ್ನು ಕೌನ್ಸಿಲರ್ ತಬಸ್ಸುಮ್ ಅರಾ ತಳ್ಳಿ ಹಾಕಿದ್ದಾರೆ. ಜನರು ಲಸಿಕೆ ಪಡೆಯುವುದಕ್ಕೆ ಹಿಂಜರಿಯುತ್ತಿದ್ದಾರೆ. ಹಾಗಾಗಿ ನಾನು ಸಿರಿಂಜ್ ಹಿಡಿದುಕೊಂಡಿದ್ದೆ ಅಷ್ಟೇ. ನಾನು ಲಸಿಕೆ ಕೊಟ್ಟಿಲ್ಲ. ಇದು ಸುಳ್ಳು ಆರೋಪ ಎಂದು ಅವರು ಹೇಳಿದ್ದಾರೆ. ಹಾಗೆಯೇ ಅವರದ್ದು ನರ್ಸಿಂಗ್ ಕೋರ್ಸ್ ಮುಗಿದಿರುವುದಾಗಿಯೂ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net