

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಬ್ಬ-ಹರಿದಿನ ಎನ್ನದೆ ಹಗಲಿರುಳು ಕಾವಲಿದ್ದು ಸಾರ್ವಜನಿಕ ಕುಟುಂಬಗಳ ರಕ್ಷಣೆ ಮಾಡುತ್ತಿರುವ ‘ಆರಕ್ಷಕ’ರ ಕುಟುಂಬಗಳೇ ಕಲಹಕ್ಕೆ ಬಲಿಯಾಗುವ ಸ್ಥಿತಿಗೆ ತಲುಪಿವೆ. ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಸಿಗದೆ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಪತ್ನಿ-ಮಕ್ಕಳ ಜತೆ ಬದುಕಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಹಿನ್ನೆಲೆಯಲ್ಲಿ ‘ವರ್ಗಾವಣೆ ಕೊಡಿ ಇಲ್ಲವಾದರೆ ವಿಚ್ಛೇದನ ಕೊಡಿಸುವಂತೆ’ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಸೋಮವಾರ (ಆ.12) ಪೊಲೀಸರ ಸಹಿ ಸಂಗ್ರಹಿಸಿರುವ ಮನವಿ ಪತ್ರ ಸಲ್ಲಿಕೆಯಾಗಿದೆ.
ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆಯಲ್ಲಿ ಪತಿ-ಪತ್ನಿ ಪ್ರಕರಣಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ 7 ವರ್ಷ ಪೂರೈಸಿರುವ ಸಿಬ್ಬಂದಿಯನ್ನು ವರ್ಗಾವಣೆಗೊಳಿಸುವಂತೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ, ಟ್ರಾನ್ಸ್‌ರ್ ಪ್ರಕ್ರಿಯೆ ಆರಂಭಿಸಿರುವ ಪೊಲೀಸ್ ಇಲಾಖೆ, 10 ವರ್ಷ ಸೇವೆ ಪೂರೈಸಿರುವ ಕಾನ್‌ಸ್ಟೆಬಲ್‌ಗಳನ್ನು ಮಾತ್ರವೇ ವರ್ಗಾವಣೆ ಮಾಡುತ್ತಿದೆ. ಮೇಲಧಿಕಾರಿಗಳು ಸಹ 10 ವರ್ಷ ಆಗಿದ್ದರಷ್ಟೇ ವರ್ಗಾವಣೆ ಮಾಡುವುದಾಗಿ ಹೇಳುತ್ತಿರುವುದರಿಂದ 7 ವರ್ಷದಿಂದ ಕಾಯುತ್ತಿರುವವರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕಾನ್‌ಸ್ಟೆಬಲ್‌ಗಳ ವರ್ಗಾವಣೆ ವಿಚಾರದಲ್ಲಿ ಸೇವಾವಧಿಯನ್ನು 7 ರಿಂದ 10 ವರ್ಷಕ್ಕೆ ಏರಿಸಿರುವ ಪೊಲೀಸ್ ಇಲಾಖೆ, ಹೆಡ್ ಕಾನ್‌ಸ್ಟೆಬಲ್‌ಗಳ ವಿಚಾರದಲ್ಲಿ ಮುಂಬಡ್ತಿ ಪಡೆದ ಬಳಿಕ ಒಂದೇ ಹುದ್ದೆಯಲ್ಲಿ 7 ವರ್ಷ ಸೇವಾವಧಿ ಮುಗಿಸಿದ್ದರಷ್ಟೇ ಟ್ರಾನ್ಸ್‌ರ್ ಮಾಡಲಾಗುತ್ತಿದೆ ಎಂದು ಷರತ್ತು ವಿಧಿಸಲಾಗಿದೆ. ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯಿಂದ 10-14 ವರ್ಷ ಸೇವೆಯ ಬಳಿಕ ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಮುಂಬಡ್ತಿ ಸಿಕ್ಕಿದೆ. ಬಹುತೇಕರ ವಯಸ್ಸು 40ರ ಅಸುಪಾಸಿನಲ್ಲಿದೆ. ಬಡ್ತಿ ಬಳಿಕ 7 ವರ್ಷ ಪೂರೈಸಿದ್ದರಷ್ಟೇ ವರ್ಗಾವಣೆ ಮಾಡುತ್ತೇವೆ ಎನ್ನುವುದು ಯಾವ ನ್ಯಾಯ. ಷರತ್ತು ಸಡಿಲಿಸಬೇಕು ಎಂದು ಹೆಡ್ ಕಾನ್‌ಸ್ಟೆಬಲ್‌ಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಮರುಪರಿಶೀಲಿಸುವಂತೆ ಡಿಜಿಪಿಗೆ ಒಳಾಡಳಿತ ಇಲಾಖೆ ಸೂಚನೆ ಕೊಟ್ಟಿದೆ.
2023 ಮಾ.9ರ ಗೆಜೆಟೆಡ್ ನೋಟಿಫಿಕೇಶನ್ ಪ್ರಕಾರ ಎಲ್ಲ ಸರಕಾರಿ ನೌಕರರು ಪತಿ-ಪತ್ನಿ ಪ್ರಕರಣದಲ್ಲಿ 7 ವರ್ಷ ಸೇವೆ ಪೂರೈಸಿದರೆ ವರ್ಗಾವಣೆಗೆ ಅರ್ಹತೆ ಇದ್ದ ಮೇಲೆ ಪೊಲೀಸ್ ಇಲಾಖೆಯಲ್ಲಿ ಮಾತ್ರ ಮುಂಬಡ್ತಿ ಹೊಂದಿದ ಮೇಲು 7 ವರ್ಷ ಸೇವೆ ಪೂರೈಸಿರಬೇಕು ಎನ್ನುತ್ತಿರುವುದು ಯಾವ ನ್ಯಾಯ. - ಹೆಡ್ ಕಾನ್‌ಸ್ಟೆಬಲ್, ಬೆಂಗಳೂರು
ವರ್ಗಾವಣೆ ಸಿಗದೆ ಜೀವನ ಯಾತನೆಯಾಗಿದೆ. 8 ತಿಂಗಳ ಮಗು ಇದೆ. ನಾನೊಂದು ಜಿಲ್ಲೆಯಲ್ಲಿ, ಪತ್ನಿ ಒಂದು ಜಿಲ್ಲೆಯಲ್ಲಿ 7 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ವ್ಯವಸ್ಥೆ ನಮ್ಮ ಸಾಂಸಾರಿಕ ಬದುಕಿಗೆ ಕೊಳ್ಳಿಯಿಟ್ಟಿದೆ. ನೆಮ್ಮದಿ ಕೊಡದಿದ್ದರೆ ವಿಷವನ್ನಾದರೂ ಕರುಣಿಸಲಿ.
- ಕಾನ್‌ಸ್ಟೆಬಲ್, ಕಲಬುರ್ಗಿ
ಮೊದಲು 3 ವರ್ಷ, ನಂತರ 7 ವರ್ಷ, ಈಗ 10 ವರ್ಷ ಎನ್ನುತ್ತಿದ್ದಾರೆ. ಸ್ವಾಮಿ ಈಗಲೇ ಮಕ್ಕಳಾಗಿಲ್ಲ. ನಾವು ಒಟ್ಟಿಗಿರುವುದು ಯಾವಾಗ. ಇದೇ ಮುಂದುವರಿದರೆ ಅನೈತಿಕ ಸಂಬಂಧಗಳಿಗೆ ಕಾರಣವಾಗುತ್ತದೆ.
- ಕಾನ್‌ಸ್ಟೆಬಲ್, ಯಾದಗಿರಿ
ವರ್ಗಾವಣೆಯಾಗಲ್ಲ ಎಂದು ತಿಳಿದು ಮಕ್ಕಳ ಜತೆಯಲ್ಲಿ ಜೀವನ ಮಾಡಿಕೊಂಡು ಹೋಗುತ್ತೇನೆಂದು ಕೋರ್ಟ್‌ಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ. ಈ ವಿಚಾರ ತಿಳಿದು ನನ್ನ ತಂದೆ-ತಾಯಿ ಮತ್ತು ನಾನು ಸಾಯುವ ಪರಿಸ್ಥಿತಿ ಬಂದಿದೆ. ದಯವಿಟ್ಟು ನನ್ನ ಕುಟುಂಬವನ್ನು ಒಂದು ಮಾಡಿ.
- ಕಾನ್‌ಸ್ಟೆಬಲ್, ಬಾಗಲಕೋಟೆ