ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿ ನೇಮಕ! ಕನ್ನಡ ಶಿಕ್ಷಕರ ಎತ್ತಂಗಡಿ…

kasaragodu school
ಸಾಂದರ್ಭಿಕ ಚಿತ್ರ
Published on

ಕಾಸರಗೋಡು: ಕಾಸರಗೋಡಿನ ಸರ್ಕಾರಿ ಕನ್ನಡ ಶಾಲೆಯೊಂದಕ್ಕೆ ಮಲಯಾಳಿ ಶಿಕ್ಷಕಿ ನೇಮಕವಾಗಿದ್ದಾರೆ. ಅದೇ ಕನ್ನಡ ಪರ ಒಲವು ಹೊಂದಿದ್ದ ಮುಖ್ಯಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಗಡಿನಾಡು ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಮಲಯಾಳಿ ಶಿಕ್ಷಕಿಯನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ವಿಳಂಬ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಒಲವಿದ್ದ ಮುಖ್ಯ ಶಿಕ್ಷಕರಿಗೆ ದೂರದ ವಯನಾಡಿಗೆ ವರ್ಗಾವಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಅವರ ಮೇಲೆ ವಿದ್ಯಾರ್ಥಿಗಳು, ಪೋಷಕರ ನಡೆಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪ ಕೂಡ ಹೊರಿಸಲಾಗಿದೆ.

ವಯನಾಡು ಸರಕಾರಿ ಶಾಲೆಗೆ ಮುಖ್ಯ ಶಿಕ್ಷಕನ ಎತ್ತಂಗಡಿ ಮಾಡಿದ್ದಕ್ಕೆ ಕೇರಳ ಶಿಕ್ಷಣ ಇಲಾಖೆಯ ನೀತಿ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹೊಸತಾಗಿ ನೇಮಕವಾಗಿರುವ ಮಲಯಾಳಿ ಶಿಕ್ಷಕಿಯ ಪಾಠ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿಯ ನೇಮಕ ಪ್ರಕರಣಕ್ಕೆ ಕರ್ನಾಟಕ ಸರ್ಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಅಲ್ಲಿನ ಶಿಕ್ಷಣ ಇಲಾಖೆ ಮಾತ್ರ ವಿದ್ಯಾರ್ಥಿಗಳ ಪ್ರತಿಭಟನೆ, ಕರ್ನಾಟಕ ಸರ್ಕಾರದ ಪತ್ರಕ್ಕೆ ಡೋಂಟ್​ ಕೇರ್​ ಎನ್ನುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರೂ ಗಡಿಭಾಗದಲ್ಲಿ ಕೇರಳ ಸರ್ಕಾರದ ದರ್ಪ ಮಾತ್ರ ಇನ್ನೂ ನಿಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net