

ಬೆಂಗಳೂರು: ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯ ದಿನದ ಸಂಭ್ರಮ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿ ಕಾರ್ಯಕ್ರಮ ನೆಡಯಲಿದೆ. ಇದರ ಅಂಗವಾಗಿ ಮೈದಾನದ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ನಡೆದಿರುವ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಹಾಗೂ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಆಗಸ್ಟ್ 15 ರಂದು ಬೆಳಗ್ಗೆ 09 ಗಂಟೆಗೆ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಇದರ ಅಂಗವಾಗಿ ವಿಶೇಷ ಕವಾಯತು ನಡೆಯಲಿದ್ದು, ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಒಳಗಡೆ ಮತ್ತು ಸುತ್ತ-ಮುತ್ತಲು ಈ ಕೆಳಕಂಡಂತೆ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.
1. ಕಾರ್ ಪಾಸ್‌ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್‌ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಳ್ಳುವುದು ಹಾಗೂ ಪಾಸ್‌ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಕೋರಲಾಗಿದೆ.
2. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಕ್ಯೂ.ಆರ್.ಟಿ, ಬಿ.ಬಿ.ಎಂ.ಪಿ. ಹಾಗೂ ಪಿಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3. ಕಾರ್ಯಕ್ರಮಕ್ಕೆ ಬರುವ ಎಲ್ಲ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-3 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
4. ಆ. 15ರಂದು ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ ಈ ಕೆಳಕಂಡಂತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ - ಸಫೀನಾ ಪ್ಲಾಜಾ ಎಡ ತಿರುವು ಪಡೆದು ಮೈನ್‌ಗಾರ್ಡ್ ರಸ್ತೆ - ಆಲೀಸ್ ಸರ್ಕಲ್ - ಡಿಸ್ಪೆನ್ಸರಿ ರಸ್ತೆ - ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ – ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ - ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
ಕಬ್ಬನ್ ರಸ್ತೆಯಲ್ಲಿ, ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿ.ಆರ್.ವಿ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ವೆಬ್ ಜಂಕನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬಹುದು.
ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್‌ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಪೀಟ್‌ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು-ಇನ್ ಫೆಂಟ್ರಿ ರಸ್ತೆ ಸಫೀನಾ ಪ್ಲಾಜಾ - ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಆಲಿ ಸರ್ಕಲ್ ಡಿಸ್ಪೆನ್ಸರಿ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ - ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
ಭದ್ರತಾ ದೃಷ್ಟಿಯಿಂದ ಪೆರೇಡ್ ಗೆ ಬರುವ ಎಲ್ಲಾ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್ ಫೋನ್, ಹೆಲೈಟ್, ಕ್ಯಾಮೆರಾ, ರೇಡಿಯೋ, ಕೊಡೆ ಮುಂತಾದ ವಸ್ತುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗದಂತೆ ಕೋರಲಾಗಿದೆ. ಇಂತಹ ವಸ್ತುಗಳನ್ನು ಹೊಂದಿರುವವರನ್ನು ಒಳಗೆ ಬಿಡಲಾಗುವುದಿಲ್ಲ. ಎಲ್ಲರೂ ಬೆಳಗ್ಗೆ 08-00 ಗಂಟೆಯ ಒಳಗೆ ಮೈದಾನದಲ್ಲಿ ಆಸೀನರಾಗುವಂತೆ ಕೋರಲಾಗಿದೆ.
1. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ವರೆಗೆ 2. ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್ ರಸ್ತೆ ಜಂಕ್ಷನ್ ವರೆಗೆ.
3. ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೆನ್ಸ್ ವೃತ್ತದ ವರೆಗೆ.
1. ಮಾಣಿಕ್ ಷಾ ಪೆರೇಡ್ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಯನ್ನು ಬಳಸಲು ಕೋರಲಾಗಿದೆ.
2. ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವ 112ಗೆ ಕರೆ ಮಾಡಿ.
3. ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಬಯಸುತ್ತೇವೆ.
4. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳನ್ನು ಬಿ.ಬಿ.ಎಂ.ಪಿ. ವತಿಯಿಂದ ಏರ್ಪಡಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಕೋರಿದೆ.
5. ಕವಾಯತು ವೀಕ್ಷಣೆಗೆ ಆಗಮಿಸುವವರಿಗೆ ಸೆಲ್ಲಿ ಮುಂತಾದ ಮೊಬೈಲ್ ಬಳಕೆಗೆ ನಿರ್ಬಂಧವಿರುವುದನ್ನು ಗಮನಿಸಿ ಸಹಕರಿಸಲು ಕೋರಿದೆ.