ನಿರ್ಜನ ಪ್ರದೇಶದಲ್ಲಿ ಗೆಳೆಯರ ಜತೆ ಒಬ್ಬಳೇ ಯುವತಿ: ಅಲ್ಲಿಗೆ ಹೋದ ಸ್ಥಳೀಯರಿಗೆ ಕಾದಿತ್ತು ಶಾಕ್​!

Young Girl TN (1)
Published on

ಚೆನ್ನೈ: ಯುವತಿಯೊಬ್ಬಳು ತನ್ನ ಗೆಳೆಯರ ಜತೆ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯರು ವಿಡಿಯೋ ರೆಕಾರ್ಡ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. ಗೆಳೆಯರ ನಡುವೇ ಯುವತಿ ಒಬ್ಬಳೇ ಇದ್ದಿದ್ದನ್ನು ಅನೇಕ ಜನರು ಖಂಡಿಸಿದ್ದಾರೆ.

ಯುವತಿಯು ಕನ್ಯಾಕುಮಾರಿಯ ಮೀನುಗಾರರ ಗ್ರಾಮ ಚಿನ್ನತೂರ ಮೂಲದವಳು ಎಂದು ಗುರುತಿಸಲಾಗಿದೆ. ಜನವಸತಿಯೇ ಇಲ್ಲದ ಅಥವಾ ಜನರೇ ಸುಳಿದಾಡದ ಇಡಪಾದ್ ಎಂಬ ಹೆಸರಿನ ಕರಾವಳಿ ಪ್ರದೇಶಕ್ಕೆ ತನ್ನ ಗೆಳೆಯರ ಜತೆ ಯುವತಿ ಒಬ್ಬಳೇ ತೆರಳಿದ್ದಳು. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದು, ಸಾಕಷ್ಟು ಯುವಕರ ನಡುವೆ ಯುವತಿ ಒಬ್ಬಳೇ ಇರುವುದನ್ನು ಆ ಪ್ರದೇಶಕ್ಕೆ ಭೇಟಿ ನೀಡಿದ ಜನರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಯುವತಿ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಗಾಬರಿಯಿಂದ ಆ ಜಾಗದಲೆಲ್ಲ ಓಡಾಡಿ ಕೂಗಾಡಿದ್ದಾಳೆ. ಈ ವೇಳೆ ಆಕೆಯೊಂದಿಗೆ ಬಂದಿದ್ದ ಯುವಕರು ಕೂಡ ಇದೇ ವೇಳೆ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸಿದರು.

ಇನ್ನು ಆ ಸಮಯದಲ್ಲಿ ಯುವತಿ ಸೇರಿದಂತೆ ಆಕೆಯ ಜತೆ ಬಂದಿದ್ದ ಯುವಕರೆಲ್ಲರು ಗಾಂಜಾ ಮತ್ತಿನಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಅದಕ್ಕೆ ಪೂರಕವಾದ ಅನೇಕ ಆಘಾತಕಾರಿ ವಸ್ತುಗಳು ಸಹ ಸ್ಥಳದಲ್ಲಿ ದೊರೆತಿವೆ.

ನಿರ್ಜನ ಪ್ರದೇಶದಲ್ಲಿ ಇಂಥದ್ದೊಂದು ಬೆಳವಣಿಗೆ ಸ್ಥಳೀಯ ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಯುವತಿಯೊಬ್ಬಳು ನಾಲ್ಕೈದು ಯುವಕರ ಜತೆ ನಿರ್ಜನ ಪ್ರದೇಶದಲ್ಲಿ ಇರುವುದೆಂದರೆ ನಿಜಕ್ಕೂ ಇದು ಚಿಂತಿಸಬೇಕಾದ ಸಂಗತಿ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಲ್ಲದೆ, ತಮಿಳುನಾಡು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ತಂತಿ ಟಿವಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net