ಸರಗಳ್ಳರ ಹಿಡಿದ ಟ್ರಾಫಿಕ್ ಪೊಲೀಸ್

arrested
Published on

ಬೆಂಗಳೂರು: ಬೀದಿ ವ್ಯಾಪಾರಿಗೆ ಬೆದರಿಸಿ ತಾಮ್ರದ ಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿ ಮಾಗಡಿ ರಸ್ತೆ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಸೆಂಥಿಲ್ ಮತ್ತು ವಿಜಯ್ ಬಂಧಿತರು. ತಾಮ್ರದ ಸರ ಜಪ್ತಿ ಮಾಡಲಾಗಿದೆ. ರಾಜಾಜಿನಗರದ 6ನೇ ಹಂತದಲ್ಲಿ ಮಂಗಳವಾರ ಮಾಗಡಿ ರಸ್ತೆ ಸಂಚಾರ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಕಾನ್‌ಸ್ಟೆಬಲ್ ಸಂಧ್ಯಾ ರಾಥೋಡ್ ಕಾರ್ಯನಿರ್ವಹಿಸುವಾಗ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೃತ್ತಿಪರ ಸರಗಳ್ಳರಾದ ಸೆಂಥಿಲ್ ಮತ್ತು ವಿಜಯ್, ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ರಾಜಾಜಿನಗರ 6ನೇ ಹಂತದಲ್ಲಿರುವ ‘ದಿನತಂತಿ’ ದಿನಪತ್ರಿಕೆ ಕಚೇರಿ ಬಳಿ ಬ್ಯಾಗ್ ವ್ಯಾಪಾರಿ ಮೊಹಮ್ಮದ್ ನೂರ್‌ಗೆ ಬೆದರಿಕೆ ಹಾಕಿ, ಸರ ಕಸಿದು ಆಟೋದಲ್ಲಿ ಆರೋಪಿಗಳು ತೆರಳುತ್ತಿದ್ದರು. ಕರ್ತವ್ಯದಲ್ಲಿದ್ದ ಎಎಸ್‌ಐ ರಾಮಕೃಷ್ಣ ಮತ್ತು ಸಂಧ್ಯಾ ರಾಥೋಡ್ ಬಳಿ ಕಳ್ಳತನ ಬಗ್ಗೆ ನೂರ್ ಹೇಳಿದರು.

ವಿಷಯ ಗೊತ್ತಾದ ಕೂಡಲೇ ಆಟೋವನ್ನು ಬೆನ್ನತ್ತಿ ರಾಮಕೃಷ್ಣ ಅಡ್ಡಗಟ್ಟಿದ್ದರು. ಆಟೋದಿಂದ ಇಬ್ಬರನ್ನು ಕೆಳಗಿಳಿಸಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಈ ಇಬ್ಬರನ್ನು ಮಾಗಡಿ ರಸ್ತೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಸಂಚಾರ ಪೊಲೀಸರು ಒಪ್ಪಿಸಿದ್ದಾರೆ. ವ್ಯಾಪಾರಿ ನೂರ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net