

ತರೀಕೆರೆ: ನಾಗವಂಗಲ ಗ್ರಾಮ ಸಮೀಪದ ರೈಲ್ವೆ ಮೇಲ್ಸೇತುವೆ ಬಳಿ ಹತ್ತಾರು ಗ್ರಾಮಗಳ ಜನರ ಸುಗಮ ಸಂಚಾರಕ್ಕಾಗಿ ಸೇವಾ ರಸ್ತೆ ನಿರ್ಮಿಸಲಾಗಿದೆ. ಆದರೆ ಈ ರಸ್ತೆಯೇ ಸಂಚಕಾರ ತರುವಂತಿದೆ.
ಅಜ್ಜಂಪುರ-ಬೀರೂರು ಮಾರ್ಗಮಧ್ಯೆ ಇರುವ ನಾಗವಂಗಲ ರೈಲ್ವೆ ಮೇಲ್ಸೇತುವೆ ಬಳಿ ಮೇಗಲಹಳ್ಳಿ, ಹಿರೇನಲ್ಲೂರು, ಕುಡ್ಲೂರು, ಕೊರಟಿಕೆರೆ, ವೀರಾಪುರ ಹೊಸೂರು, ಗಿರಿಯಾಪುರ, ಚೆನ್ನಾಪುರ ಇನ್ನಿತರ ಗ್ರಾಮಸ್ಥರ ಸಂಚಾರಕ್ಕಾಗಿ ಐದಾರು ವರ್ಷಗಳ ಹಿಂದೆ ನಿರ್ಮಿಸಿರುವ ಸೇವಾ ರಸ್ತೆಯ ಎರಡೂ ಬದಿ ಗಿಡಗಂಟಿ, ಕುರುಚಲು ಗಿಡಗಳು ಬೆಳೆದು ನಿಂತಿವೆ. ಗಿಡಗಂಟಿ, ಬಳ್ಳಿಯಿಂದ ಆವೃತವಾಗಿರುವ ರಸ್ತೆ ವಿಷಜಂತುಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.
ಮಹಿಳೆಯರು, ಮಕ್ಕಳು, ವೃದ್ಧರು, ಜನಸಾಮಾನ್ಯರು ದೈನಂದಿನ ಕಾರ್ಯಗಳಿಗೆ, ಶಾಲಾ ಕಾಲೇಜುಗಳಿಗೆ ಕಡೂರು ಮಾತ್ರವಲ್ಲ, ಅಜ್ಜಂಪುರ ಹಾಗೂ ತರೀಕೆರೆ ತಾಲೂಕು ಕೇಂದ್ರಗಳಿಗೆ ಹೋಗಿ ಬರಲು ನಾಗವಂಗಲ ರೈಲ್ವೆ ಮೇಲ್ಸೇತುವೆ ಸಮೀಪದ ಸರ್ವೀಸ್ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ಏಕೈಕ ಸೇವಾ ರಸ್ತೆ ನಿರ್ವಹಣೆ ಕೊರತೆಯಿಂದ ಹದಗೆಟ್ಟಿದೆ.
ದಟ್ಟವಾಗಿ ಬೆಳೆದು ನಿಂತಿರುವ ಗಿಡಗಂಟಿ, ಬಳ್ಳಿಗಳು ಸೇವಾ ರಸ್ತೆಯ ಎರಡೂ ಬದಿ ವ್ಯಾಪಿಸಿವೆ. ಪಾದಚಾರಿಗಳು ಮಾತ್ರವಲ್ಲ ಕಾರು, ಆಟೋ, ದ್ವಿಚಕ್ರ ವಾಹನ ಸವಾರರು ಕೂಡ ಮೈಯೆಲ್ಲ ಕಣ್ಣಾಗಿಸಿಕೊಂಡು ಓಡಾಡುವಂತಾಗಿದೆ. ರಸ್ತೆ ತಿರುವುಗಳಲ್ಲಿ ಆಗಾಗ ಅವಘಡ ಸಂಭವಿಸುತ್ತಲೇ ಇರುತ್ತವೆ. ಇದರಿಂದ ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಾಗವಂಗಲ ಮೇಲ್ಸೇತುವೆ ಸಮೀಪದ ಸೇವಾ ರಸ್ತೆ ಬದಿಯಲ್ಲಿರುವ ಗಿಡಗಂಟಿ, ಕುರುಚಲು ಗಿಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
ಬೆಳಕಿನ ವ್ಯವಸ್ಥೆ ಇಲ್ಲ: ಗಿಡಗಂಟಿ ಬೆಳೆದು ನಿಂತಿರುವುದರಿಂದ ಸೇವಾ ರಸ್ತೆ ಭಾಗಶಃ ಮುಚ್ಚಿಕೊಂಡಿದೆ. ನಾಗವಂಗಲ ಗೇಟ್‌ನಿಂದ ವೀರಾಪುರ ಹೊಸೂರು ಗ್ರಾಮದವರೆಗಿನ 2 ಕಿಮೀ ರಸ್ತೆ ಅಕ್ಕಪಕ್ಕದಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ. ಕತ್ತಲಾದ ಬಳಿಕ ಈ ರಸ್ತೆಯಲ್ಲಿ ಸಂಚಾರ ಅತ್ಯಂತ ಅಪಾಯಕಾರಿ. ಜನ ಇಲ್ಲಿ ಓಡಾಡಲು ಹೆದರುತ್ತಾರೆ.
ಅಡಗಿವೆ ವಿಷಜಂತುಗಳು: ಸೇವಾ ರಸ್ತೆ ಪಕ್ಕದಲ್ಲೇ ನಾಗವಂಗಲ ರೈಲ್ವೆ ನಿಲ್ದಾಣ ಇರುವುದರಿಂದ ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು ಕಡೆ ತೆರಳಲು ಈ ಮಾರ್ಗದ ಮೂಲಕವೇ ನಿಲ್ದಾಣ ಸೇರಿ ಆಯಾ ಊರಿನ ರೈಲು ಹಿಡಿಯಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮೇಲ್ಸೇತುವೆ ಪಕ್ಕದಲ್ಲಿ ಅರಣ್ಯ ಇಲಾಖೆ ನೆಡುತೋಪು ಇರುವುದರಿಂದ ಸೇವಾ ರಸ್ತೆಯಲ್ಲಿ ಮೊಲಗಳು ದಿಢೀರ್ ಅಡ್ಡ ಬರುತ್ತವೆ. ವಿಷಜಂತುಗಳ ಓಡಾಟ ಮಾಮೂಲಾಗಿದೆ. ಹುಳಹುಪ್ಪಟೆ ಉಪಟಳದಿಂದ ಜನ ಎಚ್ಚರಿಕೆಯಿಂದಲೇ ಹೆಜ್ಜೆ ಹಾಕಬೇಕಾಗಿದೆ. ಸ್ವಲ್ಪ ಮೈ ಮರೆತರೂ ಅಪಾಯ ನಿಶ್ಚಿತ.
ಪಿಡಬ್ಲುೃಡಿಗೆ ಹಸ್ತಾಂತರ: ನಾಗವಂಗಲ ಗ್ರಾಮ ಸಮೀಪದ ರೈಲ್ವೆ ಮೇಲ್ಸೇತುವೆ ಬಳಿ ಸರ್ಕಾರ ಸೇವಾ ರಸ್ತೆ ನಿರ್ಮಿಸಿದೆ. ಕೆಶಿಪ್ ಜವಾಬ್ದಾರಿ ವಹಿಸಿ ನಿರ್ಮಿಸಿದ ರಸ್ತೆ ಪಿಡಬ್ಲುೃಡಿಗೆ ಹಸ್ತಾಂತರ ಮಾಡಿ ಐದಾರು ವರ್ಷ ಕಳೆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಮುಂದಾಗದಿರುವುದು ನಿರ್ಲಕ್ಷೃಕ್ಕೆೆ ಹಿಡಿದ ಕೈಗನ್ನಡಿ.
ಪಿಡಬ್ಲುೃಡಿ ಎಇಇ ಆಗಿ ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ನಾಗವಂಗಲ ರೈಲ್ವೆ ಮೇಲ್ಸೇತುವೆ ಸಮೀಪದ ಸೇವಾ ರಸ್ತೆ ಅವ್ಯವಸ್ಥೆ ಬಗ್ಗೆ ನಿಖರ ಮಾಹಿತಿ ಇಲ್ಲ. ತಕ್ಷಣ ಸಂಬಂಧಿಸಿದ ಇಂಜಿನಿಯರ್‌ಗೆ ಸೂಚಿಸಿ ಗಿಡಗಂಟಿ, ಕುರುಚಲು ಗಿಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಬ್ಲುೃಡಿ ಎಇಇ ಜಿ.ಎ.ನಾಗೇಂದ್ರಪ್ಪ ವಿಜಯವಾಣಿಗೆ ಮಾಹಿತಿ ನೀಡಿದರು.