

ಬೆಂಗಳೂರು: ಈ ವರ್ಷದ ಮೊದಲಾರ್ಧದಲ್ಲಿ 5830 ಮಂದಿ ಅಪಘಾತದಿಂದ ಮೃತಪಟ್ಟಿರುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾದ ಅಲೋಕ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್, ಅಮೂಲ್ಯ ಜೀವಗಳನ್ನು ಉಳಿಸಲು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ತಂತ್ರಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕಿದೆ ಎಂದು ಕರೆ ನೀಡಿದ್ದಾರೆ.
ಕಳೆದ ಆರು ತಿಂಗಳಲ್ಲಿ 5830 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಕಳೆದ ನಾಲ್ಕ ತಿಂಗಳಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿವೆ. ಮೇ ತಿಂಗಳಲ್ಲಿ 1094, ಜೂನ್ನಲ್ಲಿ 965, ಜುಲೈನಲ್ಲಿ 807 ಮತ್ತು ಆಗಸ್ಟ್ ತಿಂಗಳಲ್ಲಿ 795 ಮಂದಿ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಬಲಿಯಾದವರಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯವರೇ ಅತ್ಯಧಿಕ ಎಂಬುದನ್ನು ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ. ರಸ್ತೆ ಅಪಘಾತ ಮತ್ತು ಸಾವು ನೋವು ತಡೆಯಲು ಪೊಲೀಸರ ನಿರಂತರ ಪ್ರಯತ್ನದ ನಡುವೆಯೂ ಈ ಅಂಕಿ-ಅಂಶ ಆಘಾತಕಾರಿಯಾಗಿದೆ.