

ಬಾಲಾಸೊರ್: ಕೇಂದ್ರ ಸಚಿವರು ಸಾಗುತ್ತಿದ್ದ ಕಾರನ್ನು ಓವರ್ಟೇಕ್ ಮಾಡಿದ ಪಶ್ಚಿಮ ಬಂಗಾಳ ಮೂಲದ ಪ್ರವಾಸಿಗರನ್ನು ಬಾಲಾಸೊರ್ ಪೊಲೀಸರು ಬಂಧಿಸಿ, ಕಾರುಗಳನ್ನು ವಶಕ್ಕೆ ಪಡೆದ ಘಟನೆ ಬಾಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಸೋಮವಾರ (ಫೆ. 22) ನಡೆದಿದೆ.
ಪ್ರತಾಪ್ ಸಂತೋಷ್ ಚಂದ್ರ ಸಾರಂಗಿ ( ಕೇಂದ್ರ ಸರ್ಕಾರದ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ) ಕಾರನ್ನು ಓವರ್ಟೇಕ್ ಮಾಡಿದ ಬೆನ್ನಲ್ಲೇ ಪ್ರವಾಸಿಗರಿಗೆ ಶಾಕ್ ಎದುರಾಗಿದೆ.
ಪಶ್ಚಿಮ ಬಂಗಾಳ ಮೂಲದ ಸಂತೋಷ್ ಷಾ ಎನ್ನುವವರು ತಮ್ಮ ಕುಟುಂಬದೊಂದಿಗೆ ಎರಡು ಕಾರುಗಳಲ್ಲಿ ಒಡಿಶಾದ ಪಂಚಲಿಂಗೇಶ್ವರದಿಂದ ಕೋಲ್ಕತಕ್ಕೆ ಹಿಂದಿರುಗುತ್ತಿದ್ದಾಗ ಈ ಸನ್ನಿವೇಶ ಜರುಗಿದೆ.
ನಾವು ಪ್ರಯಾಣಿಸುವಾಗ ಬಾಸ್ತಾ ಸಮೀಪದಲ್ಲೇ ಸೈರನ್ ಧ್ವನಿ ಕೇಳಿಸಿತು. ಆಂಬುಲೆನ್ಸ್ ಅಂದುಕೊಂಡು ದಾರಿ ಬಿಟ್ಟೆವು. ಅದು ಆಂಬುಲೆನ್ಸ್ ಅಲ್ಲ ಬೆಂಗಾವಲು ವಾಹನದೊಂದಿಗೆ ಸಾಗಿದ ಸಚಿವರು ಕಾರು ಎಂದು ತದನಂತರದಲ್ಲಿ ಗೊತ್ತಾಯಿತು. ಸ್ವಲ್ಪ ಸಮಯದಲ್ಲಿ ಪೈಲಟ್ ಕಾರು ಹೆದ್ದಾರಿಯಿಂದ ಕಚ್ಛಾ ರಸ್ತೆಗೆ ಹೋಯಿತು. ಇದಾದ ಬಳಿಕವೇ ನಾವು ಅವರನ್ನು ಓವರ್ಟೇಕ್ ಮಾಡಿದೆವು ಎಂದು ಸಂತೋಷ್ ಷಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದಾದ ಬಳಿಕ ಸಚಿವರ ಪೈಲಟ್ ಕಾರು, ಎರಡು ವಾಹನಗಳನ್ನು ಸುಮಾರು 20 ಕಿ.ಮೀ ವರೆಗೆ ಚೇಸ್ ಮಾಡಿ ಜಲೇಸ್ವರ್ ಏರಿಯಾದ ಲಖನಾಥ್ ಟೋಲ್ ಗೇಟ್ ಬಳಿ ವಶಕ್ಕೆ ಪಡೆದು ಬಾಸ್ತಾ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಸಂತೋಷ್ ಕುಟುಂಬವನ್ನು ಸುಮಾರು 5 ಗಂಟೆಗಳ ಕಾಲ ಬಂಧಿಸಿ, ತದನಂತರದಲ್ಲಿ ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಮತ್ತೊಮ್ಮೆ ಈ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿರಿ: ಈ ಆರತಿಗೆ ‘ಆರತಿಗೊಬ್ಬಳು, ಕೀರುತಿಗಿಬ್ಬರು!’; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ