3 ವರ್ಷಗಳ ಹಿಂದೆಯೇ ಸತ್ತ ಮಗಳು ದಿಢೀರ್​ ಪ್ರತ್ಯಕ್ಷ! ಗಂಡನ ಬಿಟ್ಟು ಬಂದವಳ ರೋಚಕ ಕಥೆಯಿದು!

daughter
Published on

ಪಟನಾ: ಮೂರು ವರ್ಷದಲ್ಲೇ ಸತ್ತಿದ್ದ ಮಗಳು ಇದೀಗ ಅಪ್ಪ ಅಮ್ಮನ ಎದುರು ದಿಢೀರ್​ ಪ್ರತ್ಯಕ್ಷವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗಂಡನೊಂದಿಗೆ ಜಗಳವಾಡಿಕೊಂಡು ಮನೆಗೆ ಬಂದಿದ್ದ ಆಕೆಯ ಬದುಕಿನ ರೋಚಕ ಕಥೆಯೊಂದು ಇದೀಗ ಕುಟುಂಬದ ಎದುರು ಬಯಲಾಗಿದೆ.

ಬಿಹಾರದ ಕೈಮೂರಿನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆ ಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿ ಬೇರೆ ಕುಟುಂಬಕ್ಕೆ ಕಳುಹಿಸಲಾಗಿತ್ತು. ಆದರೆ ಗಂಡನೊಂದಿಗೆ ಜಗಳ ಮಾಡಿಕೊಂಡ ಆಕೆ 2018ರಲ್ಲಿ ತವರು ಮನೆಗೆ ಬಂದು ಸೇರಿದ್ದಾಳೆ. ಅದಾದ ಕೆಲವೇ ದಿನಗಳಲ್ಲಿ ಆಕೆ ತವರು ಮನೆಯಿಂದಲೂ ಕಾಣೆಯಾಗಿದ್ದಾಳೆ. ಆಕೆ ಕಾಣೆಯಾದ ಎರಡೇ ದಿನಗಳಲ್ಲಿ ಮನೆ ಹತ್ತಿರವಿದ್ದ ನದಿ ನೀರಿನ ಕಾಲುವೆಯಲ್ಲಿ ಮೃತ ದೇಹ ಸಿಕ್ಕಿದೆ. ಮೃತ ದೇಹದ ಚಪ್ಪಲಿ ಮತ್ತು ಕರವಸ್ತ್ರವನ್ನು ನೋಡಿ, ಅದು ಕಳೆದುಹೋಗಿರುವ ಮಗಳೇ ಎಂದು ಕುಟುಂಬ ನಿರ್ಧರಿಸಿದೆ. ಅದಾದ ನಂತರ ಆಕೆಯ ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಲಾಗಿದೆ.

2018ರಲ್ಲೇ ಬೂದಿಯಾಗಿದ್ದ ಮಗಳು 2021ರಲ್ಲಿ ಮತ್ತೊಮ್ಮೆ ಪ್ರತ್ಯಕ್ಷಳಾಗಿದ್ದಾಳೆ. ಆಕೆಯನ್ನು ಕಂಡ ಪೊಲೀಸರು ಕುಟುಂಬಕ್ಕೆ ವಿಚಾರ ಮುಟ್ಟಿಸಿದ್ದಾರೆ. ಅದನ್ನು ಕೇಳಿ ಕುಟುಂಬಕ್ಕೆ ಶಾಕ್​ ಆಗಿದೆ. ಮಹಿಳೆಯನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆಕೆ ತವರು ಮನೆಗೆ ಬಂದ ಮೇಲೆ ಅಲ್ಲಿದ್ದ ಬಾವನೊಂದಿಗೆ ಅವಳಿಗೆ ಪ್ರೀತಿ ಹುಟ್ಟಿದೆ. ಬಾವನಿಗೂ ಅದಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದರು. ಅವರಿಬ್ಬರು ಉಪಾಯ ಮಾಡಿ ಮನೆಯಿಂದ ಓಡಿ ಹೋಗಿದ್ದಾರೆ. ದೂರದೂರಿಗೆ ಹೋಗಿ ಮಹಿಳೆ ಬಾವನೊಂದಿಗೆ ಸಂಸಾರ ಆರಂಭಿಸಿದ್ದಾಳೆ. ಅವರಿಗೆ ಇದೀಗ ಎರಡು ವರ್ಷದ ಮಗುವೂ ಇದೆ.

ನನಗೆ ಗಂಡ ಕಾಟ ಕೊಡುತ್ತಿದ್ದ. ಅದಕ್ಕಾಗೇ ತವರಿಗೆ ಬಂದೆ. ಅಲ್ಲಿ ಬಾವನ ಮೇಲೆ ಪ್ರೀತಿ ಹುಟ್ಟಿ ಅವರೊಂದಿಗೆ ಓಡಿ ಹೋದೆ. ಅದಾದ ಮೇಲೆ ಮನೆಯಲ್ಲಿ ಏನಾಯಿತೆಂದು ನನಗೆ ಗೊತ್ತಿಲ್ಲ. ಇದೀಗ ನಾನು ಬಾವನೊಂದಿಗೇ ಬದುಕಲು ಇಷ್ಟಪಡುತ್ತೇನೆ ಎನ್ನುತ್ತಿದ್ದಾಳೆ ಕುಟುಂಬದ ಪ್ರಕಾರ ಸತ್ತು ಬದುಕಿರುವ ಮಗಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net