17 ಲಕ್ಷ ಕೇಸ್​ಗಳು; 11 ಲಕ್ಷ ರೋಗಿಗಳು ಚೇತರಿಕೆ

Covid 19 Death
Published on

ನವದೆಹಲಿ: ಭಾರತದಲ್ಲಿ ಕರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ ಯಾದರೂ ಗುಣಮುಖರ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಪರಿಸ್ಥಿತಿ ಹತೋಟಿಯಲ್ಲಿದೆ. ದೇಶದಲ್ಲಿನ ಸೋಂಕಿತರ ಪ್ರಮಾಣ 17 ಲಕ್ಷ ದಾಟಿದ್ದು, ಅದರಲ್ಲಿ ಈಗಾಗಲೇ 11 ಲಕ್ಷಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಶನಿವಾರ 51 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದು, ಇದು ಈವರೆಗಿನ ಒಂದೇ ದಿನದ ಗರಿಷ್ಠ ಪ್ರಮಾಣವಾಗಿದೆ. ಸುಮಾರು 10 ದಿನಗಳಿಂದಲೂ ಪ್ರತಿದಿನ 30 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖ ರಾಗುತ್ತಿದ್ದಾರೆ.

ಶನಿವಾರ ಹೊಸದಾಗಿ 55 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, 854 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 5.74 ಲಕ್ಷ ಅಂದರೆ ಒಟ್ಟು ಸೋಂಕು ಪ್ರಕರಣಗಳ ಶೇಕಡ 32.43ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಮರಣ ಪ್ರಮಾಣ ಶೇಕಡ 2.13ಕ್ಕೆ ಇಳಿಕೆಯಾಗಿದ್ದು, ಜಾಗತಿಕ ವಾಗಿ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ. ಕಳೆದ 24 ತಾಸಿನಲ್ಲಿ 19 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಪ್ರಮಾಣ 17.71 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 218 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 37,600ಕ್ಕಿಂದ ಅಧಿಕವಾಗಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕರೊನಾ ತೀವ್ರವಾಗಿದ್ದು, ಅಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತವೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸರಾಸರಿ ತಲಾ 5 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net