

LeT commander Altaf Lalli : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಮೃತಪಟ್ಟಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಗ್ರರನ್ನು ಸೆದೆಬಡಿಯುವ ಕೆಲಸದಲ್ಲಿ ಭಾರತೀಯ ಸೇನೆ ನಿರತವಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಬೆಳಗ್ಗೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಹೊಡೆದುರುಳಿಸಲಾಗಿದೆ.
ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ಮೇರೆಗೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭಯೋತ್ಪಾದಕರು ಇರುವ ಜಾಗವನ್ನು ಪತ್ತೆಹಚ್ಚಲಾಯಿತು. ಬಳಿಕ ಗುಂಡಿನ ಚಕಮಕಿ ನಡೆದು, ಎಲ್‌ಇಟಿ ಕಮಾಂಡರ್ನ್ನು ಹೊಡೆದುರುಳಿಸಲಾಯಿತು.
ಇದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರಕ್ಕೆ ಆಗಮಿಸಿದ್ದಾರೆ. ಬಂಡಿಪೋರಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಯ ಸಮಗ್ರ ಭದ್ರತಾ ಪರಿಶೀಲನೆ ನಡೆಸುತ್ತಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿರುವ ಶಂಕಿತ ಎಲ್‌ಇಟಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದ್ದಾರೆ.
ಇನ್ನು ಸಿಂಧೂ ನದಿಯ ಹರಿಯುವುದನ್ನು ನಿಲ್ಲಿಸಿದ ಭಾರತ ವಿರುದ್ಧ ತೀವ್ರ ಕಿಡಿಕಾರಿರುವ ಪಾಕಿಸ್ತಾನ, ರಾತ್ರಿಯಿಡೀ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಇಂದು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಇಬ್ಬರು ಉಗ್ರರ ಮನೆಗಳನ್ನು ಛಿದ್ರಗೊಳಿಸಿದೆ. ಮನೆಗಳು ಸಂಪೂರ್ಣವಾಗಿ ಉಡೀಸ್ ಆಗಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದೆ. (ಏಜೆನ್ಸೀಸ್)