ಫಾರೂಖ್ ಅಬ್ದುಲ್‍ಗೆ ಮರ್ಮಾಘಾತ : ಬಿಜೆಪಿ ಸೇರಿದ ನ್ಯಾಷನಲ್ ಕಾನರೆನ್ಸ್ ಮುಖಂಡರು!

bjp
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳಾಗುತ್ತಿದ್ದು, ನ್ಯಾಷನಲ್ ಕಾನ್ಫರೆನ್ಸ್ ನ​ಹಲವು ನಾಯಕರು ಬಿಜೆಪಿಗೆ ಸೇರುವ ಮೂಲಕ ಫಾರೂಖ್ ಅಬ್ದುಲ್‍ಗೆ ಮರ್ಮಾಘಾತ ನೀಡಿದ್ದಾರೆ.

ಜಮ್ಮು ಪ್ರದೇಶದಲ್ಲಿ ಕತುವಾ ಜಿಲ್ಲಾಧ್ಯಕ್ಷ ಸೇರಿದಂತೆ ಹಲವು ನ್ಯಾಷನಲ್ ಕಾನ್ಫರೆನ್ಸ್​ನ ಪದಾಕಾರಿಗಳು, ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು. ಜಮ್ಮು ಮತ್ತು ಕಾಶ್ಮೀರ ಘಟಕದ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಮುಖಂಡರನ್ನು ಸ್ವಾಗತಿಸಲಾಯಿತು.

ದೇಶದ ಜನರ ಮತ್ತು ಧರ್ಮದ ಕಲ್ಯಾಣಕ್ಕಾಗಿ ಬಿಜೆಪಿ ತನ್ನ ಬದ್ದತೆಯನ್ನು ಎತ್ತಿ ಹಿಡಿಯುತ್ತದೆ ಎಂದು ರೈನಾ ಈ ಸಂದರ್ಭದಲ್ಲಿ ಹೇಳಿದರು. ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ನಿರ್ಮಾಣ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಮತ್ತು ಸಾಧನೆಗಳು ಐತಿಹಾಸಿಕವಾಗಿವೆ. ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿ ರಾಷ್ಟ್ರದ ಏಕತೆ ಮತ್ತು ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಹೊಸ ಪ್ರವೇಶವನ್ನು ಪ್ರೀತಿ ಮತ್ತು ಸೌಹಾರ್ದತೆಯಿಂದ ಸ್ವಾಗತಿಸುವುದಾಗಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಸಿಂಗ್ ರಾಣಾ ತಿಳಿಸಿದರು. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಕ್ಕಾಗಿ ಪ್ರಧಾನಿಯವರ ನಾಯಕತ್ವವನ್ನು ಬೆಂಬಲಿಸುತ್ತಾ ನಾವು ಬಿಜೆಪಿ ಸೇರಿರುವುದಾಗಿ ನ್ಯಾಷನಲ್ ಕಾನರೆನ್ಸ್‍ನ ಕತುವಾ ಜಿಲ್ಲಾ ಘಟಕದ ನೇತೃತ್ವ ವಹಿಸಿದ್ದ ಸಂಜೀವ್ ಕುಜರಿಯ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಕವೀಂದರ್ ಗುಪ್ತ ಮಾತನಾಡಿ, ಜಮ್ಮುಕಾಶ್ಮೀರ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಲು ಬಿಜೆಪಿ ಬದ್ದವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net