ಕೆಲಸ ಹುಡುಕುತ್ತಿರುವವರಿಗೆ ಬಂಪರ್ ಆಫರ್: ಐಟಿ ಕಂಪನಿಗಳಿಂದ 88,000 ನೇಮಕಾತಿ ಘೋಷಣೆ

IT companies
Published on

ನವದೆಹಲಿ: ಕರೊನಾ ನಂತರ ಕಂಗೆಟ್ಟಿದ್ದ ಐಟಿ ಕಂಪನಿಗಳು ಇದೀಗ ಸಂಪೂರ್ಣ ಚೇತರಿಸಿಕೊಂಡಿದೆ. ಅದಕ್ಕೆ ಸಾಕ್ಷಿಯಾಗಿ ನೇಮಕಾತಿ ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿವೆ. ದೇಶದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಮಹೀಂದ್ರಾ ಪುನಃ ಕಾಲೇಜು ಕ್ಯಾಂಪಸ್​ಗಳಿಗೆ ಹೆಜ್ಜೆಯಿಡಲು ಮುಂದಾಗಿವೆ. ಹೊಸ ಪ್ರತಿಭಾನ್ವಿತರಿಗಾಗಿ ಇಂಜಿನಿಯರಿಂಗ್‌ ಕಾಲೇಜುಗಳತ್ತ ಮುಖ ಮಾಡಿವೆ.

ದೇಶದಲ್ಲಿನ ಪ್ರಮುಖ ಐಟಿ ಕಂಪನಿಗಳ ಹೇಳಿಕೆಯ ಪ್ರಕಾರ, ಈ ವರ್ಷ 81,000 ದಿಂದ 88,000ದಷ್ಟು ಹೊಸ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳಲಿವೆ. ಇದರಲ್ಲಿ ಟಿಸಿಎಸ್‌ ಕಂಪನಿಯೊಂದೇ ಅರ್ಧಕ್ಕಿಂತ ಹೆಚ್ಚು ಫ್ರೆಷರ್ಸ್‌ನ್ನು ನೇಮಕ ಮಾಡಿಕೊಳ್ಳಲಿದೆ.

ಟಿಸಿಎಸ್​ನಿಂದ ಅತಿ ಹೆಚ್ಚು ನೇಮಕ: ಟಾಟಾ ಕಂಪನಿಯ ಒಡೆತನದಲ್ಲಿರುವ ದೇಶದ ಅತಿ ದೊಡ್ಡ ಐಟಿ ಸೇವಾ ರಫ್ತು ಸಂಸ್ಥೆ ಟಿಸಿಎಸ್‌ ಈ ಬಾರಿ ಸುಮಾರು 40,000 ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ. 2024ನೇ ಆರ್ಥಿಕ ವರ್ಷದಲ್ಲೂ ಇಷ್ಟೇ ಫ್ರೆಷರ್ಸ್‌ ಅನ್ನು ಟಿಸಿಎಸ್‌ ನೇಮಕ ಮಾಡಿಕೊಂಡಿತ್ತು. 2023ರಲ್ಲಿ 44,000 ಹೊಸಬರಿಗೆ ಕಂಪನಿ ಉದ್ಯೋಗಾವಕಾಶ ನೀಡಿತ್ತು.

2024ನೇ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೂರು ತ್ರೈಮಾಸಿಕಗಳ ಕಾಲ ಫ್ರೆಷರ್ಸ್‌ ನೇಮಕವನ್ನು ರದ್ದುಗೊಳಿಸಿದ್ದ ಇನ್ಫೋಸಿಸ್‌ ಕೂಡ ಇದೀಗ ಹೊಸಬರ ನೇಮಕಕ್ಕೆ ಮುಂದಾಗಿದೆ. ಈ ವರ್ಷ ಸುಮಾರು 15,000-20,000 ಫ್ರೆಷರ್ಸ್‌ ಅನ್ನು ನೇಮಕ ಮಾಡಿಕೊಳ್ಳಲು ಹೊಸ ಯೋಜನೆಯನ್ನು ಕೈಗೊಂಡಿದೆ. 2024ರಲ್ಲಿ ಕಂಪನಿ 11,900 ಫ್ರೆಷರ್ಸ್‌ಗೆ ಮಾತ್ರ ಉದ್ಯೋಗ ಅವಕಾಶವನ್ನು ನೀಡಿತ್ತು. ಆದರೆ 2023ರ 50,000 ಜನರ ನೇಮಕಾತಿಗೆ ಹೋಲಿಸಿದರೆ 2022ರಲ್ಲಿಯ ನೇಮಕಾತಿ ಶೇ. 76ರಷ್ಟು ಕುಸಿತ ಕಂಡಿತ್ತು.

ಎಚ್‌ಸಿಎಲ್‌ ಟೆಕ್‌ 2024ರಲ್ಲಿ ಸುಮಾರು 12,141 ಫ್ರೆಷರ್ಸ್‌ ಉದ್ಯೋಗವಕಾಶವನ್ನು ನೀಡಿತ್ತು. 2023ರಲ್ಲಿ 26,734 ನೇಮಕಕ್ಕೆ ಹೋಲಿಸಿದರೆ ಕಂಪನಿಯ ನೇಮಕಾತಿಯಲ್ಲಿ ಅರ್ಧದಷ್ಟು ಕಡಿಮೆಯಾಗಿತ್ತು. ಇದೀಗ ಈ ವರ್ಷ 10,000 ದಿಂದ 12,000 ಹೊಸಬರನ್ನು ಕ್ಯಾಂಪಸ್‌ಗಳಿಂದ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net