

ಮುಂಬೈ: ವರ್ಷ ಮುಗಿಯುವುದಕ್ಕೆ 16 ದಿನಗಳು ಮಾತ್ರ ಇವೆ. ಈಗಾಗಲೇ ಎಲ್ಲ ಚಿತ್ರರಂಗಗಳಲ್ಲೂ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಬಾಲಿವುಡ್ನಲ್ಲೂ ಲೆಕ್ಕಾಚಾರ ಶುರುವಾಗಿದ್ದು, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ.
ಹಾಗೆ ನೋಡಿದರೆ, ಇತ್ತೀಚಿನ ಕೆಲವು ವರ್ಷಗಳನ್ನು ನೋಡಿದರೆ, ಬಾಲಿವುಡ್ಗೆ 2022 ಅಷ್ಟೇನೂ ಚೆನ್ನಾಗಿರಲಿಲ್ಲ. ದಕ್ಷಿಣದ ಚಿತ್ರಗಳ ಮುಂದೆ ಹಿಂದಿ ಚಿತ್ರಗಳು ಡಲ್ ಆಗಿದ್ದಷ್ಟೇ ಅಲ್ಲ, ಇನ್ನು ಬಾಲಿವುಡ್ಗೆ ಉಳಿಗಾಲವಿಲ್ಲ ಎಂಬಂತಹ ಚರ್ಚೆಗಳು ನಡೆಯತ್ತಲೇ ಇವೆ. ಇದರ ನಡುವೆಯೂ ಒಂದಿಷ್ಟು ಚಿತ್ರಗಳು ದುಡ್ಡು ಮಾಡುವಲ್ಲಿ ಯಶಸ್ವಿಯಾಗಿವೆ.
ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಿಂದ ಸೇರಿ ಈ ಚಿತ್ರ ಒಟ್ಟು 254 ಕೋಟಿ ರೂ. ಸಂಗ್ರಹಿಸಿದೆ. ನಂತರದ ಸ್ಥಾನ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದು. ಈ ಚಿತ್ರವು 247 ಕೋಟಿ ರೂ. ಸಂಗ್ರಹಿಸಿದೆ ಎಂಯ ಹೇಳಲಾಗುತ್ತಿದೆ. ಮೂರನೆಯ ಸ್ಥಾನದಲ್ಲಿ 220 ಕೋಟಿ ರೂ. ಸಂಗ್ರಹಿಸಿರುವ 'ದೃಶ್ಯಂ 2' ಚಿತ್ರವಿದೆ. 'ಭೂಲ್ ಬುಲಯ್ಯ 2' ಚಿತ್ರವು 181.75 ಕೋಟಿ ರೂ. ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ಅಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥೈವಾಡಿ' ಚಿತ್ರವು 126.50 ಕೋಟಿ ರೂ. ಗಳಿಸುವ ಮೂಲಕ ಐದನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ 'ವಿಕ್ರಂ ವೇದ', 'ಜುಗ್ಜುಗ್ ಜೀಯೋ', 'ರಾಮ್ ಸೇತು', 'ಸಾಮ್ರಾಟ್ ಪೃಥ್ವಿರಾಜ್ ಮತ್ತು 'ಲಾಲ್ ಸಿಂಗ್ ಛಡ್ಡಾ' ಚಿತ್ರಗಳಿವೆ. ಒಂದು ಕಾಲಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ಚಿತ್ರಗಳು ಕೋಟಿಕೋಟಿ ಸಂಪಾದನೆ ಮಾಡಿದ ಉದಾಹರಣೆ ಇದೆ. ಆದರೆ, ಈ ವರ್ಷ ಅಕ್ಷಯ್ ಕುಮಾರ್ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಎರಡು ಅಟ್ಟರ್ ಫ್ಲಾಪ್ ಎಂದನಿಸಿಕೊಂಡಿವೆ. 'ರಾಮ್ ಸೇತು' ಮತ್ತು 'ಸಾಮ್ರಾಟ್ ಪೃಥ್ವಿರಾಜ್' ಚಿತ್ರಗಳು ಕಷ್ಟಪಟ್ಟು 73 ಮತ್ತು 68.25 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದುಡಿದಿದ್ದೆಷ್ಟು ಗೊತ್ತಾ? ಕೇವಲ 60 ಕೋಟಿ ರೂ.
ಹಾಗಂತ ಈ ಪಟ್ಟಿ ಇಲ್ಲಿಗೆ ಮುಗಿಯುತ್ತದೆ ಎಂದಲ್ಲ. ವರ್ಷ ಮುಗಿಯುವುದಕ್ಕೆ ಇನ್ನೂ ಎರಡು ವಾರಗಳಿದ್ದು, ಅದರಲ್ಲಿ ರಣವೀರ್ ಸಿಂಗ್ ಅಭಿನಯದ 'ಸರ್ಕಸ್' ಬಿಡುಗಡೆಗೆ ಸಜ್ಜಾಗಿದ್ದು, ಅದರ ಮೇಲೆ ಒಂದಿಷ್ಟು ನಿರೀಕ್ಷೆಗಳಿವೆ. ಈ ಚಿತ್ರ ಮಿನಿಮಮ್ 50 ಕೋಟಿ ರೂ. ದುಡಿಯುವ ನಿರೀಕ್ಷೆ ಇದ್ದು, ಒಂದು ಪಕ್ಷ 60 ಕೋಟಿ ರೂ ಮೇಲೆ ಗಳಿಕೆಯಾದರೆ, ಪಟ್ಟಿಯಿಂದ 'ಲಾಲ್ ಸಿಂಗ್' ಔಟ್ ಆಗಲಿದೆ.