

ನವದೆಹಲಿ: ದೇಶಾದ್ಯಂತ ಮಾರುಕಟ್ಟೆಗೆ ಟೊಮ್ಯಾಟೊ ಸರಬರಾಜು ಹೆಚ್ಚಾದ ಹಿನ್ನೆಲೆಯಲ್ಲಿ ಅದರ ಬೆಲೆಯು ಕಳೆದ ತಿಂಗಳಿಗೆ ಹೋಲಿಸಿದರೆ ಶೇ. 22.4ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ. ರಾಷ್ಟ್ರಮಟ್ಟದಲ್ಲಿ ಟೊಮ್ಯಾಟೊ ಚಿಲ್ಲರೆ ಸರಾಸರಿ ದರ ಅ. 14ರಂದು ಕೆಜಿಗೆ ರೂ. 67.50 ಇದ್ದದ್ದು ನ. 14ಕ್ಕೆ ರೂ. 52.35 ಆಗಿತ್ತು. ಇದೇ ಅವಧಿಯಲ್ಲಿ ದೆಹಲಿಯ ಆಜಾದ್ಪುರ ಮಂಡಿಯಲ್ಲಿ ಹೋಲ್ಸೇಲ್ ದರ ಶೇ. 50ರಷ್ಟು ಇಳಿದಿತ್ತು.
ಅಂದರೆ ಕ್ವಿಂಟಾಲ್ಗೆ 5883 ರೂ. ಇದ್ದದ್ದು 2969 ರೂ. ಆಗಿತ್ತು. ಮಹಾರಾಷ್ಟ್ರದ ಪಿಂಪಲ್ಗಾಂವ್, ಆಂಧ್ರದ ಮದನಪಲ್ಲಿ, ಕರ್ನಾಟಕದ ಕೋಲಾರದಲ್ಲೂ ಇದೇ ರೀತಿಯ ಇಳಿಕೆ ಗೋಚರಿಸಿದೆ. ಪ್ರಮುಖ ಟೊಮ್ಯಾಟೊ ಕೇಂದ್ರಗಳಾದ ಮದನಪಲ್ಲಿ ಮತ್ತು ಕೋಲಾರದಲ್ಲಿ ಆವಕ ಕಡಿಮೆಯಾಗಿದ್ದರೂ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ನಿಂದ ಸರಬರಾಜಿನ ಪ್ರಮಾಣ ಏರಿಕೆಯಾಗಿ ದರ ನಿಯಂತ್ರಣಕ್ಕೆ ಬಂದಿದೆ.
ಇದರ ಜತೆಗೆ ಪೂರಕ ಹವಾಮಾನ ವಾತಾವರಣ ಇದ್ದುದರಿಂದ ಫಸಲಿನ ಬೆಳವಣಿಗೆ, ಜಮೀನಿನಿಂದ ಗ್ರಾಹಕರವರೆಗಿನ ಸಾಗಾಣಿಕೆಗೆ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 2023-24ರಲ್ಲಿ ದೇಶದ ಟೊಮ್ಯಾಟೊ ಉತ್ಪಾದನೆ ಶೇ. 4ರಷ್ಟು, ಅಂದರೆ 213.20 ಲಕ್ಷ ಟನ್ಗೆ ಏರಲಿದೆ. ಅಕ್ಟೋಬರ್ನಲ್ಲಿ ಆಂಧ್ರ, ಕರ್ನಾಟಕದಲ್ಲಿ ನಿರಂತರವಾಗಿ ಹೆಚ್ಚು ಮಳೆಯಾಗಿದ್ದರಿಂದ ಟೊಮ್ಯಾಟೊ ಬೆಳೆಯಲು ಮತ್ತು ಸಾಗಿಸಲು ತೊಂದರೆಯಾಗಿ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿತ್ತು ಎಂದೂ ಸಚಿವಾಲಯ ವಿವರಿಸಿದೆ.