BBKS11: ಇವರೇ ನೋಡಿ ಬಿಗ್ ಬಾಸ್​ ಮನೆಯಲ್ಲಿ ಮಿಂಚುತ್ತಿರುವ 4 ಜೋಡಿಗಳು!

rivalary contestants
Published on

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂಬ ಪಟ್ಟ ಪಡೆದಿರುವ ಬಿಗ್ ಬಾಸ್​ ಸೀಸನ್​ 11 ಆರಂಭಗೊಂಡು ಇಂದಿಗೆ ಒಂದೂವರೆ ತಿಂಗಳು ಕಳೆದಿದೆ. ಶುರುವಾದ ಮೊದಲ ದಿನವೇ ಘಟಾನುಘಟಿ ಸ್ಪರ್ಧಿಗಳ ಮಧ್ಯೆ ವಾಕ್ಸಮರ ನಡೆದಿದ್ದು, ಒಬ್ಬರಿಗೊಬ್ಬರು ಕೈ-ಕೈಮಿಲಾಯಿಸುವ ಹಂತ ತಲುಪಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಕೇವಲ ಒಂದು ತಿಂಗಳಲ್ಲಿ ಅನೇಕ ಶಾಕಿಂಗ್ ಬೆಳವಣಿಗೆಗಳು ಬಿಗ್ ಬಾಸ್​ ಮನೆಯಲ್ಲಿ ಸಂಭವಿಸಿದೆ. ಮೊದಲೆಲ್ಲ ಜಟಾಪಟಿಯಲ್ಲೇ ಸಮಯ ವ್ಯರ್ಥ ಮಾಡ್ತಿದ್ದ ಮನೆ ಮಂದಿ, ಇದೀಗ ಟಾಸ್​ಗಳಲ್ಲಿ ಸಕ್ರಿಯರಾಗಿ, ತಾವು ಬಂದಿರುವ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.

ವೈಲ್ಡ್​ ಕಾರ್ಡ್​ನಲ್ಲಿ ಬಿಗ್ ಮನೆಯನ್ನು ಪ್ರವೇಶಿಸಿದ ಹನುಮಂತು, ಟಾಸ್ಕ್​ಗಳ ಜತೆಗೆ ಸ್ಪರ್ಧಿಗಳೊಂದಿಗೆ ಬೆರೆತು, ಆಟದ ದಿಕ್ಕನ್ನೇ ಬದಲಾಯಿಸುತ್ತಿರುವುದು ನೋಡುಗರನ್ನು ಸೆಳೆಯುತ್ತಿದೆ. ಈ ಮಧ್ಯೆ ಮನೆಯಲ್ಲಿ ಒಂದಷ್ಟು ಜೋಡಿಗಳು ವೀಕ್ಷಕರಲ್ಲಿ ರಿಜಿಸ್ಟರ್​ ಆಗಿದ್ದಾರೆ. ಪ್ರತಿಯೊಂದು ಸೀಸನ್​ನಲ್ಲಿಯೂ ಒಂದೆರೆಡು ಜೋಡಿಗಳು ಆಯಾ ಸೀಸನ್​ ಪೂರ ಮಿಂಚಿ, ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗುತ್ತಾರೆ. ಅದು ಹಾಸ್ಯ, ಸಂಗೀತ, ನೃತ್ಯ, ಪ್ರೀತಿ, ಬಾಂಧವ್ಯ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಗಮನಸೆಳೆದಿರುತ್ತಾರೆ. ಅದೇ ರೀತಿ ಬಿಗ್​ಬಾಸ್​ 11ರಲ್ಲಿಯೂ ಸಹ ಕೆಲವು ಜೋಡಿಗಳು ಸಖತ್ ಸದ್ದು​ ಮಾಡುತ್ತಿದ್ದಾರೆ.

ಧರ್ಮ-ಅನುಷಾ

ಬಿಗ್ ಬಾಸ್​ ಸೀಸನ್ 11 ಗ್ರ್ಯಾಂಡ್​ ಓಪನಿಂಗ್ ದಿನವೇ ಪರಸ್ಪರ ಎದುರು-ಬದುರು ನೋಡಿಕೊಂಡು ಒಳಗೆ ಬಂದ ದರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ, ಹೊರಗಿದ್ದ ಸ್ನೇಹ, ಬಾಂಧವ್ಯತೆಯನ್ನು ಇಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಒಬ್ಬರನೊಬ್ಬರು ಕಾಳಜಿ ಮಾಡುವ ರೀತಿ, ತೋರಿಸುವ ಪ್ರೀತಿ, ಚಪ್ಪಾತಿ ಮಾಡಿ ತಿನ್ನಿಸೋ ದೃಶ್ಯಗಳು ಇಬ್ಬರ ಬಗ್ಗೆ ಸಖತ್​ ಚರ್ಚೆ ಮಾಡುವಂತೆ ಮಾಡುತ್ತಿದೆ.

ಶಿಶಿರ್​- ಐಶ್ವರ್ಯ ಶಿಂಧೋಗಿ

ಮನೆಯ ಆರಂಭದ ದಿನಗಳಲ್ಲಿ ಅಷ್ಟಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳದ ಶಿಶಿರ್​- ಐಶ್ವರ್ಯ, ಕಳೆದ ಎರಡು ವಾರಗಳಲ್ಲಿ ಬಹಳ ಲವಲವಿಕೆಯಿಂದ ಮಾತನಾಡುತ್ತಿದ್ದಾರೆ. ಪರಸ್ಪರ ಹೆಗಲು ಕೊಡುತ್ತಾರೆ, ಕಷ್ಟಗಳನ್ನು ಆಲಿಸುತ್ತಾರೆ, ಕಂಬನಿಗೆ ಮಿಡಿಯುತ್ತಾರೆ. ಒಟ್ಟಿಗೆ ಟಾಸ್ಕ್​ ಮಾತ್ರ ಆಡದ ಇವರಿಬ್ಬರು, ಉತ್ತಮ ಬಾಂಧವ್ಯತೆಯನ್ನು ಹೊಂದಿದ್ದಾರೆ.

ತ್ರಿವಿಕ್ರಮ್​-ಭವ್ಯ

ಒಂದಷ್ಟು ಜಗಳ ಮಾಡಿಕೊಂಡರು ಸಹ ತ್ರಿವಿಕ್ರಮ್ ಮತ್ತು ಭವ್ಯ ನಡುವಿನ ಸಂಬಂಧ ಉತ್ತಮವಾಗಿದೆ. ಟಾಸ್ಕ್​ಗೆ ಮಾತ್ರ ಸೀಮಿತವಾಗುವ ವಾಗ್ವಾದ, ವಾದ-ವಿವಾದ ನಂತರದಲ್ಲಿ ಇರುವುದಿಲ್ಲ. ಇದು ಈ ಜೋಡಿಯ ಪ್ಲಸ್​ ಪಾಯಿಂಟ್​. ಯಾವುದೇ ಚಟುವಟಿಕೆ ಕೊಟ್ಟರು ಅದನ್ನು ಗಟ್ಟಿಯಾಗಿ ನಿಂತು, ಪ್ರದರ್ಶಿಸುವ ತ್ರಿವಿಕ್ರಮ್​-ಭವ್ಯ, ಜೋಡಿಯಾಗಿ ಆಡಿದರೂ ಉತ್ತಮ ಪೈಪೋಟಿ ಕೊಡ್ತಾರೆ. ಎದುರು-ಬದುರು ಆಡಿದ್ರೂ ಸರಿಯಾದ ಟಕ್ಕರ್ ಕೊಡುತ್ತಾರೆ. ಪರಸ್ಪರ ಹೆಗಲು ಕೊಡುವ ಇವರಿಬ್ಬರು, ತಮ್ಮ ಹೇಳಿಕೆಗಳಿಗೆ ಹೆಚ್ಚು ಒತ್ತು ಕೊಡುವುದು ಗಮನಾರ್ಹ.

ಹನುಮಂತು-ಧನರಾಜ್​

ಬಿಗ್ ಮನೆಯೊಳಗೆ ಹನುಮಂತು ಪ್ರವೇಶಿಸಿದ ಮೊದಲ ದಿನದಿಂದಲೂ ಧನರಾಜ್​ ಅವರಲ್ಲಿನ ಉತ್ಸಾಹ ಮತ್ತಷ್ಟು ಹೆಚ್ಚಿದೆ. ಸದಾ ಜತೆಗಿರುವ ಇವರಿಬ್ಬರ ನಡುವೆ ಹಾಸ್ಯ ಚಟಾಕಿ, ಭಾವನೆಗಳು ಹಂಚಿಕೆ ಆಗುತ್ತಿರುತ್ತವೆ. ಮನೆಯ ಸದಸ್ಯರನ್ನು ಮತ್ತು ವೀಕ್ಷಕರನ್ನು ಅಷ್ಟಾಗಿ ನಗಿಸದೆ ಹೋದರೂ, ತಮ್ಮಲ್ಲೇ ನಸುನಗುತ, ಒಬ್ಬರ ಬಗ್ಗೆ ಮತ್ತೊಬ್ಬರು ಅರ್ಥ ಮಾಡಿಕೊಳ್ಳುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇಬ್ಬರ ಪೈಕಿ ಸರಣಿ ಟಾಸ್ಕ್​ಗಳಲ್ಲಿ ಹುನುಮಂತು ಅದ್ಭುತ ಪ್ರದರ್ಶನ ನೀಡುತ್ತ ಬಂದರೆ, ಧನರಾಜ್​ ಕೆಲವು ಟಾಸ್ಕ್​ನಲ್ಲಿ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಇಷ್ಟು ಜೋಡಿಗಳು ಪ್ರತಿ ವಾರ ವೀಕ್ಷಕರನ್ನು ಸೆಳೆಯುವಲ್ಲಿ ಒಂದೇ ಒಂದು ಹೆಜ್ಜೆ ಮುಂದಿದೆ ಎಂದರೆ ಖಂಡಿತ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net