ನಾಳೆ ದಾವಣಗೆರೆಯಲ್ಲಿ ಆದಿವಾಸಿ ದಿನಾಚರಣೆ

ನಾಳೆ ದಾವಣಗೆರೆಯಲ್ಲಿ ಆದಿವಾಸಿ ದಿನಾಚರಣೆ
Published on

ಎಚ್.ಡಿ.ಕೋಟೆ: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಆಗಸ್ಟ್ 9 ರಂದು 30ನೇ ವರ್ಷದ ವಿಶ್ವ ಆದಿವಾಸಿ ದಿನಾಚರಣೆಯನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಅಧ್ಯಕ್ಷ ಜಿ.ಸ್ವಾಮಿ ತಿಳಿಸಿದರು.

ದಾವಣಗೆರೆ ನಗರದ ಬಂಬೂ ಬಜ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶ್ರೀ ಸಿದ್ದರಾಮ ಸ್ವಾಮೀಜಿ, ಚಿತ್ರದುರ್ಗದ ಮೇದ ಕೇತೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟನೆ ನೆರವೇರಿಸಲಿದ್ದಾರೆ. ಪರಿಷತ್ತಿನ ರಾಜ್ಯ ಅಧ್ಯಕ್ಷ ಎಂ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜೇನು ಕುರುಬ, ಯರವ, ಸೋಲಿಗ, ಕಾಡು ಕುರುಬ ಸೇರಿದಂತೆ ಆದಿವಾಸಿಗಳ ಮನೆ ನಿರ್ಮಾಣಕ್ಕೆ ಕೇರಳ ಮಾದರಿಯಲ್ಲಿ 7 ಲಕ್ಷ ರೂ. ಅನುದಾನ ನೀಡಬೇಕು. ಆಶ್ರಮ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಬೇಕು, ಆಶ್ರಮ ಶಾಲೆಗೆ ಇರುವ ವಾಲ್ಮೀಕಿ ಪದವನ್ನು ರದ್ದುಪಡಿಸಿ ಆದಿವಾಸಿ ಆಶ್ರಮ ಶಾಲೆ ಎಂದು ನವೀಕರಿಸಬೇಕು, ಆದಿವಾಸಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಶೇಷ ಯೋಜನೆ ರೂಪಿಸಬೇಕು, ಅರಣ್ಯ ಹಕ್ಕು ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು, ಮುಜಾಫರ್ ಅಸಾದಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಆದಿವಾಸಿಗಳ ಮೂಲಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮದಲ್ಲಿ ಒತ್ತಾಯ ಮಾಡಲಾಗುವುದು. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಒತ್ತಾಯಿಸಿದರು.

ಅಭಿನಂದನೆ: ಪಿಎಚ್.ಡಿ ಪದವಿ ಪಡೆದಿರುವ ಮೂಲ ಆದಿವಾಸಿ ಸಮುದಾಯದ 24ಜನರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಮೊತ್ತ ಹಾಡಿಯ ಸೋಮಣ್ಣ, ವಕೀಲ ಡಾ.ಜೆ.ಎಸ್.ಮಧುಕುಮಾರ್, ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಸಂಶೋಧನಾ ಮುಖ್ಯಸ್ಥೆ ಡಾ.ಕೆಎನ್ ಮೇಸತ್ರಿ ಅವರನ್ನು ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜು, ತಾಲೂಕು ಅಧ್ಯಕ್ಷ ಕಾಳಪ್ಪ, ಮಹಿಳಾ ಘಟಕದ ಅಧ್ಯಕ್ಷೆ ನಿಂಗಮ್ಮ, ನಿರ್ದೇಶಕ ಬಸವರಾಜು ಇತರರು ಇದ್ದರು.

ಪೋಟೋ ಇದೆ
ಜಿ.ಸ್ವಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net