ನಾಳೆ ಬೆಂಗಳೂರು ಬಂದ್​: ಬೆಂಬಲಿಸುವ ಸಂಘಟನೆಗಳ ಸಂಖ್ಯೆ ಏರಿಕೆ; ಮನೆಯಿಂದ ಹೊರಡುವ ಮುನ್ನ ಒಮ್ಮೆ ಯೋಚಿಸಿ

Auto
Published on

ಬೆಂಗಳೂರು: ರಾಜಧಾನಿ ಬೆಂಗಳೂರು ನಾಳೆ ಬಂದ್ ಆಗಿರಲಿದೆ. ಅರ್ಥಾತ್, ಆಟೋ, ಕ್ಯಾಬ್, ಶಾಲಾ ವಾಹನ, ಖಾಸಗಿ ಬಸ್​ ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳ ಸಂಚಾರ ಇರುವುದಿಲ್ಲ. ಈ ಬಂದ್​ಗೆ ಬೆಂಬಲ ಸೂಚಿಸಿರುವ ಸಂಘಟನೆಗಳ ಸಂಖ್ಯೆ ಹೆಚ್ಚಳಗೊಂಡಿರುವುದರಿಂದ ಬಂದ್​ ತೀವ್ರವಾಗಿರುವ ಲಕ್ಷಣಗಳು ಗೋಚರಿಸಿವೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ 32 ವಾಹನ ಸಂಘಟನೆಗಳವರು ಬಂದ್​ಗೆ ಮುಂದಾಗಿದ್ದು, ಇಂದು ಮತ್ತಷ್ಟು ಸಂಘಟನೆಗಳು ಬಂದ್​ಗೆ ಕೈಜೋಡಿಸಿದ್ದು, ಒಟ್ಟು 37 ಸಂಘಟನೆಗಳು ಜೊತೆಯಾಗಿ ಪ್ರತಿಭಟನೆ ನಡೆಸಲಿವೆ.

ಹೀಗಾಗಿ ನಾಳೆ ರಾಜಧಾನಿ ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಅಧಿಕ ಖಾಸಗಿ ವಾಹನಗಳ ಸಂಚಾರ ಸ್ತಬ್ಧವಾಗಲಿದೆ. ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಂಡು ಸಭೆ ನಡೆಸಲಿದ್ದೇವೆ ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ ಹೇಳಿಕೆ ನೀಡಿದ್ದಾರೆ.

ಪರಿಣಾಮವಾಗಿ ಆಟೋ-ಕ್ಯಾಬ್ ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳ ಲಭ್ಯತೆ ನಾಳೆ ತೀರಾ ವಿರಳವಾಗಿರುವುದರಿಂದ ಅವುಗಳನ್ನೇ ನೆಚ್ಚಿಕೊಂಡು ಮನೆಯಿಂದ ಹೊರಡುವವರು ಒಮ್ಮೆ ಯೋಚಿಸುವುದು ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net