

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯ ವಿಷಯ ಕೊನೆಗೂ ಮಂಗಳವಾರ ರಾತ್ರಿ ಅಂತಿಮಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದೆಹಲಿಯಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ನೂತನ ಸಚಿವರು ಯಾರಾಗುತ್ತಾರೆ ಎಂಬ ಬಗ್ಗೆ ಈವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಸಂಭಾವ್ಯರ ಹೆಸರುಗಳು ಕೇಳಿಬರುತ್ತಿವೆ.
ನಾಳೆ ಬೆಳಗ್ಗೆಯೇ ಅಧಿಕೃತ ಪಟ್ಟಿಯನ್ನು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಕಳಿಸಲಿದ್ದಾರೆ. ಮಂತ್ರಿಗಳಾಗಲಿರುವ ಬಹುತೇಕ ಶಾಸಕರಿಗೆ ಈವರೆಗೂ ದೂರವಾಣಿ ಕರೆ ಹೋಗಿಲ್ಲ. ಆದರೆ ನಾಳೆಯ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನಲ್ಲಿರುವಂತೆ ಕೆಲವರಿಗೆ ಸೂಚನೆ ನೀಡಲಾಗಿದೆ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಯಲ್ಲಿದ್ದು ತಮ್ಮ ಸಂಪುಟ ರಚನೆ ಕುರಿತು ಬಿಜೆಪಿಯ ವರಿಷ್ಠರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಸಚಿವ ಸ್ಥಾನದ ಆಕಾಂಕ್ಷಿಗಳನೇಕರು ಕೂಡ ದೆಹಲಿಯಾತ್ರೆ ಕೈಗೊಂಡಿದ್ದರು.