

ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ಸೇರಿದ ಗಣಂಗೂರು ಟೋಲ್ನಲ್ಲಿ ರಾಜಕೀಯ ಪುಡಾರಿಗಳು ಪುಂಡಾಟ ಮೆರೆದಿದ್ದು, ಟೋಲ್ ಹಣ ಕಟ್ಟದೇ ಸಿಬ್ಬಂದಿಗಳ ಮೇಲೆ ಧಿಮಾಕು ತೋರಿದ್ದಾರೆ.
ಟೋಲ್ ಕಟ್ಟಿ ಎಂದಿದ್ದಕ್ಕೆ 'ಕೈ' ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿರುವುದಾಗಿ ತಿಳಿದುಬಂದಿದೆ. ನಿಂದನೆ ಮಾಡಿದ್ದಲ್ಲದೇ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಈ ಘಟನೆ ಗಣಂಗೂರು ಟೋಲ್ನಲ್ಲಿ ಸಂಭವಿಸಿದ್ದು, ಹಲ್ಲೆಯ ದೃಶ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
KA 06 M 8164 ನಂಬರ್ನ ಕಾರಿನಲ್ಲಿ ಮೈಸೂರು ಕಡೆಗೆ ಹೊರಟಿದ್ದ ವ್ಯಕ್ತಿ, ಕಾಂಗ್ರೆಸ್ ಪಕ್ಷದ ಕಮಿಟಿ ಒಂದರ ಪದಾಧಿಕಾರಿ ಎಂದು ಕಾರಿನಲ್ಲಿ ಅಳವಡಿಸಲಾಗಿದ್ದ ನಾಮಫಲಕದ ಮೂಲಕ ಸ್ಪಷ್ಟವಾಗಿದೆ. ಟೋಲ್ ಹಣ ಕಟ್ಟಿದರೆ ಮಾತ್ರ ಗೇಟ್ ತೆರೆಯಲಾಗುವುದು ಎಂದು ಸಿಬ್ಬಂದಿಗಳು ಹೇಳಿದ್ದಕ್ಕೆ ಕಿಡಿಕಾರಿದ ಕೈ ಮುಖಂಡ ಹಾಗೂ ಉಳಿದ ಪ್ರಯಾಣಿಕರು, ಕಾರಿನಿಂದ ಕೆಳಗಿಳಿದು ಏಕಾಏಕಿ ಅವಾಜ್ ಹಾಕಿದ್ದಾರೆ. ನೀವು ಯಾರಾದರೆ ನಮಗೇನು, ಹಣ ಕೊಡಿ ಎಂದು ಪಟ್ಟು ಹಿಡಿದಿದ್ದಕ್ಕೆ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆಗೈದಿದ್ದಾರೆ.
ಮಹಿಳಾ ಸಿಬ್ಬಂದಿಯ ಜುಟ್ಟು ಹಿಡಿದು ಎಳೆದಾಡಿದ ಕಾರಿನಲ್ಲಿದ್ದ ಮಹಿಳೆಯನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಮನಬಂದಂತೆ ವರ್ತಿಸಿದವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ, ದೂರನ್ನು ದಾಖಲಿಸಿಕೊಳ್ಳದೆ ಅವರನ್ನು ಸ್ಥಳದಿಂದ ಕಳುಹಿಸಿಕೊಟ್ಟಿರುವ ಪೊಲೀಸರ ವಿರುದ್ಧ ಸ್ಥಳೀಯರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.