

ಬೀಜಿಂಗ್: ಚೀನಾದಲ್ಲಿ ಉಯ್ಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ಮತ್ತೊಂದು ಮಜಲನ್ನು ತಲುಪಿದೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗಳನ್ನು ನೆಡಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಯಾತನಾ ಶಿಬಿರಗಳನ್ನೇ ಚೀನಾ ರೂಪಿಸಿದೆ.
ಇದೀಗ, ಇಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಮತ್ತೊಂದು ಆಘಾತ ನೀಡಿರುವ ಚೀನಾ, ಉಯ್ಘರ್ ಮುಸ್ಲಿಮರು ನಿರ್ಮಿಸಿದ್ದ ಮಸೀದಿಗಳನ್ನು ನೆಲಸಮಗೊಳಿಸಿದೆ. ಅದೇ ಸ್ಥಳದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯ ಹಾಗೂ ಸಿಗರೇಟ್ ಮಾರಾಟದ ಮಳಿಗೆಗಳನ್ನು ನಿರ್ಮಿಸಿದೆ.
ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಸುನ್ಗಮ್ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಎರಡು ಮಸೀದಿಗಳನ್ನು ಕೆಡವಿ ಆ ಜಾಗದಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ಕಟ್ಟಲಾಗಿದೆ.
2018ರಲ್ಲಿ ಟೋಕುಲ್ ಮಸೀದಿಯನ್ನು ಕಡೆವಿ ಆ ಜಾಗದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇನ್ನೊಂದೆಡೆ, ಅಜ್ನಾ ಮಸೀದಿ ಜಾಗದಲ್ಲಿ ಸಿಗರೇಟ್ ಹಾಗೂ ಮದ್ಯ ಮಾರಾಟ ಮಳಿಗೆ ತಲೆ ಎತ್ತಿದೆ.
ಆದರೆ, ಚೀನಾದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ಹೇಳುವುದೇ ಬೇರೆ. ವಾಯವ್ಯ ಚೀನಾದ ಕ್ಸಿನ್ಜಿಯಾಂಗ್ನ ಉಯ್ಘರ್ ಮುಸ್ಲಿಮರ ಸ್ವಾಯತ್ತ ಪ್ರದೇಶದಲ್ಲಿ ನೈರ್ಮಲ್ಯವನ್ನು ಕಾಪಾಡಲು ಸರ್ಕಾರ ಶ್ರಮಿಸುತ್ತಿದೆ. ಅಲ್ಲಿನ ಜನರ ಜೀವನಮಟ್ಟ ಸುಧಾರಿಸಲು ಶೌಚಗೃಹಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಇದರದ್ದಾಗಿದೆ ಎಂದು ಹೇಳುತ್ತಿದೆ.
ಶೌಚಗೃಹ ಕ್ರಾಂತಿ ಕರೆ ನೀಡಿದ್ದರಿಂದ ಹೆಚ್ಚು ಹೆಚ್ಚು ಶೌಚಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದಕ್ಕಾಗಿ ಮಸೀದಿಗಳನ್ನು ಕೆಡವಿದ್ದರ ಬಗ್ಗೆ ಸರ್ಕಾರವೂ ಯಾವುದೇ ಸಮಜಾಯಿಷಿ ನೀಡಿಲ್ಲ. ಸಾಂಪ್ರದಾಯಿಕ ಹಾಗೂ ಪಾರಂಪರಿಕ ಪದ್ಧತಿಗಳನ್ನು ತ್ಯಜಿಸುವಂತೆ ಚೀನಾ ಸರ್ಕಾರ ಉಯ್ಘರ್ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಲೇ ಇದೆ. ಇದಕ್ಕಾಗಿ ಕಾನೂನುಗಳನ್ನು ರಚಿಸಿದೆ. ಇದರ ಮುಂದುವರಿದ ಭಾಗವಾಗಿ ಧಾರ್ಮಿಕ ನೆಲೆಗಳನ್ನು ಧ್ವಂಸಗೊಳಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.