ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು

coronavirus-
Published on

ನವದೆಹಲಿ: ಇನ್ನೇನು ಕೆಲ ತಿಂಗಳಲ್ಲಿಯೇ ಕರೊನಾ ನಿಗ್ರಹಕ್ಕೆ ಜಗತ್ತಿನಲ್ಲಿ ಲಸಿಕೆ ಸಜ್ಜಾಗುತ್ತಿದೆ. ಜತೆಗೆ ದೇಶೀಯವಾಗಿಯೂ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ ಕೂಡ ಹೊಸ ಭರವಸೆ ಮೂಡಿಸಿದೆ.

ಒಂದೆಡೆ ರಷ್ಯಾ ಲಸಿಕೆಯನ್ನು ಸಿದ್ಧಪಡಿಸಿ ನೋಂದಣಿಯನ್ನು ಮಾಡಿದೆ. ಆದರೆ, ಇದನ್ನು ಪಾಶ್ಚಾತ್ಯರು ಸಂಶಯದಿಂದಲೇ ನೋಡುತ್ತಿದ್ದಾರೆ ಎನ್ನುವುದು ಬೇರೆ ಮಾತು. ಆದರೂ ಇದರ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಕೂಡ ಸಾಗಿದೆ.

ಇನ್ನೊಂದೆಡೆ, ಆಕ್ಸ್​ಫರ್ಡ್​ ವಿವಿ ಲಸಿಕೆ, ಅಮೆರಿಕದ ಮಾಡೆರ್ನಾ ಔಷಧಗಳು ಮುಂಚೂಣಿಯಲ್ಲಿವೆ. ಜತೆಗೆ, ವರ್ಷಾಂತ್ಯದಲ್ಲಂತೂ ಬಳಕೆಗೆ ಮುಕ್ತವಗುವುದು ಖಚಿತ. ಇಡೀ ಜಗತ್ತು ಈಗ ಈ ಲಸಿಕೆಗಳ ಮೇಲೆ ಭರವಸೆ ಹೊತ್ತು ಕೂತಿದೆ. ಆದರೆ, ಇವುಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡುವಂತೆ ಕರೊನಾ ವೈರಸ್​ ಹೊಸ ರೂಪಾಂತರ ಪಡೆದುಕೊಂಡಿದೆ...!

ಕರೊನಾ ವೈರಸ್​ ಆರು ತಿಂಗಳಿಗೊಮ್ಮೆ ರೂಪಾಂತರ ಪಡೆದುಕೊಳ್ಳಬಹುದು ಎಂದು ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಜತೆಗೆ ಬೇರೆ ಬೇರೆ ದೇಶಗಳಲ್ಲಿ ಇದರ ಸ್ವರೂಪ ಬದಲಾಗಿದೆ ಎಂಬುದನ್ನು ಕಂಡುಕೊಂಡಿದ್ದರು.

ಆದರೆ, ಮಲೇಷ್ಯಾದಿಂದ ಈಗ ಹೊರ ಬಿದ್ದಿರುವ ಸುದ್ದಿ ತಜ್ಞರನ್ನು ಕೊಂಚ ಆತಂಕಕ್ಕೆ ದೂಡಿದೆ. ಕರೊನಾ ವೈರಸ್​ನ ಹೊಸ ರೂಪಾಂತರವೊಂದು ಅಲ್ಲಿನ ರೋಗಿಯಲ್ಲಿ ಕಂಡುಬಂದಿದ್ದು, ಅದನ್ನು 'D614G' ಎಂದು ಹೆಸರಿಸಲಾಗಿದೆ. ಇದು ಹಾಲಿ ಕಂಡುಬರುತ್ತಿರುವ ವೈರಸ್​ ರೂಪಾಂತರಕ್ಕಿಂತ ಹತ್ತು ಪಟ್ಟು ಹೆಚ್ಚು ಮಾರಕ ಎಂದು ಮಲೇಷ್ಯಾದ ಆರೋಗ್ಯ ಮಹಾನಿರ್ದೇಶಕ ನೂರ್​ ಹಿಷಾಮ್​ ಅಬ್ದುಲ್ಲಾ ಹೇಳಿದ್ದಾರೆ.

ಹೀಗಾಗಿ ಈ ಅಭಿವೃದ್ಧಿಪಡಿಸಲಾಗುತ್ತಿರುವ ನಡೆಯುತ್ತಿರುವ ಲಸಿಕೆಗಳು ನಿಷ್ಪ್ರಯೋಜಕವಾಗಬಹುದು ಎಂಬ ಆತಂಕವೂ ಎದುರಾಗಿದೆ. ವೈರಸ್​ನ ಹೊಸ ರೂಪಾಂತರದಿಂದಾಗಿ ಸಂಶೋಧಕರು ಹೊಸದಾಗಿ ಈ ನಿಟ್ಟಿನಲ್ಲಿ ಪ್ರಯೋಗ ನಡೆಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಈ ವೈರಸ್​ ಕುರುಹು ಪತ್ತೆಯಾದ ವ್ಯಕ್ತಿ ಭಾರತಕ್ಕೆ ಭೇಟಿ ನೀಡಿದ್ದ. ಬಳಿಕವೇ ಆತನಿಗೆ ಸೋಂಕು ತಗುಲಿದೆ ಎಂಬುದು ಅಬ್ದುಲ್ಲಾ ಹೇಳುತ್ತಾರೆ. ಅಲ್ಲಿಗೆ ಈ ವೈರಸ್​ನಿಂದ ಭಾರತಕ್ಕೂ ಅಪಾಯ ಕಾದಿದೆ ಎಂದೇ ಹೇಳಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ. ಒಟ್ಟಿನಲ್ಲಿ ಕರೊನಾ ಮಹಾಮಾರಿ ತೊಲಗುತ್ತೆ ಎಂಬ ವಿಶ್ವಾಸ ಮೂಡಿದ್ದಾಗಲೇ, ಅದರ ಮತ್ತೊಂದು ರೂಪ ಆತಂಕ ಹುಟ್ಟಿಸಿರುವುದಂತೂ ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net