ಇಂದು ರಕ್ಷಾ ಬಂಧನ: ಸಾಮರಸ್ಯ, ಭ್ರಾತೃತ್ವದ ಪರ್ವ

Edit-3
Published on

ಪ್ರದ್ಯುಮ್ನ

ಶ್ರಾವಣ ಮಾಸದ ಪೂರ್ಣಿಮೆಯಂದು ರಕ್ಷಾಬಂಧನದ ಸಂಭ್ರಮ. ಸಹೋದರತ್ವದ ಸಂದೇಶ ಸಾರುವ ಈ ಹಬ್ಬ ಒಂದೊಮ್ಮೆ ಉತ್ತರ ಭಾರತದಲ್ಲಿ ಜನಪ್ರಿಯವಾಗಿತ್ತು. ಇದೀಗ ದೇಶದಾದ್ಯಂತ ಹಾಗೂ ಭಾರತೀಯರು ನೆಲೆಸಿರುವ ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಆಚರಿಸಲ್ಪಡುತ್ತಿದೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮದ ಹಿನ್ನೆಲೆ ಹೊಂದಿರುವ ರಕ್ಷಾ ಬಂಧನ ಉತ್ಸವವು ಈ ನೆಲದ ಮೂಲಗುಣವಾದ ಭ್ರಾತೃತ್ವದ ಸಂದೇಶ ಸಾರುವ ವಿಶಿಷ್ಟ ಹಬ್ಬ. ಅಣ್ಣ-ತಂಗಿ, ಅಕ್ಕ-ತಮ್ಮಂದಿರ ನಡುವಿನ ಉತ್ಕಟ ಪ್ರೀತಿಯೇ ಈ ಹಬ್ಬದ ಹೂರಣ.

ಸೋದರನ ಕೈಗೆ ‘ರಾಖಿ’ ನೂಲು ಕಟ್ಟುವುದು ಸಹೋದರತ್ವದ ಬಾಂಧವ್ಯದ ಸಂಕೇತ. ಸೋದರ-ಸೋದರಿಯರ ನಡುವಿನ ಬಾಂಧವ್ಯ ನೂರ್ಕಾಲ ಬಾಳಲಿ ಎಂಬುದು ಇದರ ಆಶಯ. ಇನ್ನು ಹಣೆಗೆ ತಿಲಕ ಇಡುವುದರ ಹಿಂದೆ ಶೃಂಗಾರ, ವಿಜಯಿಯಾಗಿ ಬಾ ಎಂಬ ಹಾರೈಕೆಯಿದೆ. ಬಾಯಿಂದ ಬರುವ ಮಾತುಗಳು ಸಿಹಿಯಾಗಿರಬೇಕು, ಶತ್ರುವಿಗೂ ನೋವಾಗದಂತಿರಬೇಕು ಎಂಬುದರ ಸಂಕೇತವಾಗಿ ಸಿಹಿ ತಿನ್ನಿಸುವುದು ವಾಡಿಕೆ.

ನೂಲಿಗೂ ಬಲವಿದೆ: ಕೃಷ್ಣನ ಬೆರಳಿಗೆ ಪೆಟ್ಟಾಗಿ ರಕ್ತಸ್ರಾವವಾಗಿದ್ದದ್ದನ್ನು ಕಂಡ ದ್ರೌಪದಿ ತನ್ನ ಸೀರೆಯ ತುದಿಯನ್ನೇ ಹರಿದು ಗಾಯಕ್ಕೆ ಕಟ್ಟಿದಾಗ, ಇದರ ಒಂದೊಂದು ನೂಲಿನ ಋಣವನ್ನೂ ತಾನು ತೀರಿಸುವುದಾಗಿ ಕೃಷ್ಣ ಭರವಸೆ ನೀಡಿದ. ಮುಂದೊಮ್ಮೆ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಸೋದರಿಯ ಕೂಗಿಗೆ ಓಗೊಡುವ ಕೃಷ್ಣ ಅಕ್ಷಯಾಂಬರ ಕರುಣಿಸಿದ. ಸೋದರನ ನೋವಿಗೆ ಸೋದರಿಯ ಸ್ಪಂದನೆ, ಆಪತ್ತಿನಲ್ಲಿರುವ ಸೋದರಿಗೆ ಸೋದರನ ಶ್ರೀರಕ್ಷೆ ಇದರಲ್ಲಿ ಧ್ವನಿತ.

ಮಹಾಭಾರತದಲ್ಲಿ ಚಕ್ರವ್ಯೂಹ ಭೇದಿಸಲು ಹೊರಡುವ ಅಭಿಮನ್ಯು ಅಮ್ಮ ಸುಭದ್ರೆಯಲ್ಲಿ ಆಶೀರ್ವಾದ ಬೇಡಿದಾಗ ಆಕೆ ತನ್ನ ಸೀರೆ ಸೆರಗಿನ ತುದಿಯ ನೂಲು ಹರಿದು ಅಭಿಮನ್ಯುವಿನ ಬಲಗೈಗೆ ಕಟ್ಟಿ ‘ಇದು ನಿನ್ನ ರಕ್ಷಣೆಗೆ’ ಎಂದಳು. ಅಭಿಮನ್ಯು ಚಕ್ರವ್ಯೂಹವನ್ನೇನೋ ಭೇದಿಸುತ್ತಾನೆ, ಆದರೆ ಹೊರಗೆ ಬರುವುದು ಗೊತ್ತಿರುವುದಿಲ್ಲ. ಆದರೂ ಛಲಬಿಡದೆ ಹೋರಾಡುತ್ತಿರುವಾಗ ದುಶ್ಯಾಸನ ಅಭಿಮನ್ಯುವಿನ ಬಲಗೈ ಹಿಡಿದು ಕಡಿದಾಗ ತಾಯಿ ಸುಭದ್ರೆ ಕಟ್ಟಿದ್ದ ರಕ್ಷೆ ಕಳಚಿ ಬೀಳುತ್ತದೆ. ಅಭಿಮನ್ಯು ಕುಸಿದು ಅಸುನೀಗುತ್ತಾನೆ. ಸದಾಶಯದೊಂದಿಗೆ ಕಟ್ಟಿದ ನೂಲಿಗೂ ರಕ್ಷಣೆಯ ಶಕ್ತಿಯಿದ್ದುದನ್ನು ಇದು ಸಂಕೇತಿಸುವುದಿಲ್ಲವೇ?

ಮೊಘಲರು ಭಾರತದ ರಾಜಸ್ಥಾನವನ್ನು ಆಕ್ರಮಿಸಿ ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡಿದ್ದ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಅತ್ಯಾಚಾರ-ಕೊಲೆ- ಸುಲಿಗೆಯನ್ನು ತಪ್ಪಿಸಿಕೊಳ್ಳಲು ಅಲ್ಲಿನ ಯುವತಿಯರು ಕಂಗೆಟ್ಟಿದ್ದ ಹಿಂದು ಯುವಕರ ಕೈಗಳಿಗೆ ರಾಖಿ ಕಟ್ಟಿ, ‘ನಿಮ್ಮಿಂದ ಸೋದರಿಯರ ರಕ್ಷಣೆಯಾಗಬೇಕು’ ಎಂದು ಕೇಳಿಕೊಂಡಿದ್ದರ ಪರಿಣಾಮ ಮಹಿಳೆಯರಿಗೆ ರಕ್ಷಣೆ ದೊರಕಿತು.

ತಂಗಿ ಯಮುನೆಯಿಂದ ರಾಖಿ ಕಟ್ಟಿಸಿಕೊಂಡ ನಂತರ ಯಮ ತನ್ನ ರಾಜ್ಯವನ್ನು ಮರಳಿ ಪಡೆದದ್ದು, ಚಿತ್ತೂರಿನ ರಾಣಿ ಕರ್ಣವತಿ ಮೊಘಲ್ ರಾಜ ಹುಮಾಯೂನನಿಗೆ ರಾಖಿ ಕಳಿಸುತ್ತಿದ್ದುದು ಪುರಾಣ-ಇತಿಹಾಸದಲ್ಲಿ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net