ಖಾಸಗಿ ಆಸ್ಪತ್ರೆಗಳಲ್ಲಿ ಇಂದು ಒಪಿಡಿ ಬಂದ್; ಕೇಂದ್ರ ಸರ್ಕಾರದ ವಿರುದ್ಧ ವೈದ್ಯರ ಪ್ರತಿಭಟನೆ

OPD
Published on

ಬೆಂಗಳೂರು: ಆಯುರ್ವೆದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ಅಲೋಪಥಿ ವೈದ್ಯರು, ಶುಕ್ರವಾರ ಹೊರರೋಗಿ ವಿಭಾಗ (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ವ್ಯತ್ಯಯವಾಗಲಿದೆ.

ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫಾನಾ) ಸೇರಿ ವೈದ್ಯರ ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ, ಒಳರೋಗಿ ವಿಭಾಗಗಳಲ್ಲಿ ಕಪ್ಪು ಪಟ್ಟಿ ಧರಿಸಿ, ಸೇವೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ರೋಗಿಗಳ ಹಿತದೃಷ್ಟಿಯಿಂದ ತುರ್ತಚಿಕಿತ್ಸೆಗಳು ಹಾಗೂ ದೂರವಾಣಿ ಸಮಾಲೋಚನೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಆದೇಶ ಹಿಂಪಡೆಯಲು ಆಗ್ರಹ: ಕೇಂದ್ರ ಸರ್ಕಾರವು ಶಲ್ಯ ಮತ್ತು ಶಲಕ್ಯ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿರುವ ಆಯುರ್ವೆದ ವೈದ್ಯರಿಗೆ 39 ಸಾಮಾನ್ಯ ಹಾಗೂ ಕಿವಿ, ಮೂಗು, ಗಂಟಲು, ಕಣ್ಣು, ಶಿರ ಮತ್ತು ದಂತ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿ ನೀಡಿ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಅಲೋಪಥಿ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವೈದ್ಯರಿಗೆ ರಜೆ ಇಲ್ಲ

ಮುಷ್ಕರದಿಂದ ರೋಗಿಗಳಿಗೆ ಆರೋಗ್ಯ ಸೇವೆ ಪಡೆಯುವಲ್ಲಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಮುಷ್ಕರ ಅವಧಿಯಲ್ಲಿ ವೈದ್ಯರಿಗೆ ರಜೆ ನೀಡದಂತೆ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸಾಕಷ್ಟು ಎಚ್ಚರಿಕೆ ನಡುವೆಯೂ ಅನುಭವಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗಲೇ ಕೆಲ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದ ಪದವೀಧರರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿರುವುದು ಎಷ್ಟು ಸರಿ?| ಡಾ.ಎಸ್.ಎಂ. ಪ್ರಸಾದ್ ಕಾರ್ಯದರ್ಶಿ, ಐಎಎಂ ಕರ್ನಾಟಕ ಶಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net