ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!

Kidney vvani
Published on

ಬೆಂಗಳೂರು: ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ, ಯಥೇಚ್ಛವಾಗಿ ಶುದ್ಧ ನೀರು ಸೇವನೆ, ಬಿಪಿ, ಶುಗರ್ ಪರೀಕ್ಷೆ, ಅನಗತ್ಯ ಔಷಧ ಸೇವನೆಗೆ ಕಡಿವಾಣ, ಮಿತವಾಗಿ ಸಕ್ಕರೆ, ಉಪ್ಪು ಬಳಕೆ, ನಿತ್ಯ ವ್ಯಾಯಾಮ ಹಾಗೂ ಧೂಮಪಾನ ತ್ಯಜಿಸುವುದರಿಂದ ಕಿಡ್ನಿ ಸಮಸ್ಯೆಗಳಿಂದ ದೂರವಿರಬಹುದು.....

ವಿಶ್ವ ಮೂತ್ರಪಿಂಡ ದಿನ ಅಂಗವಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸಹಯೋಗದಲ್ಲಿ ಮಣಿಪಾಲ್ ಆಸ್ಪತ್ರೆ ಬುಧವಾರ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ‘ಮಣಿಪಾಲ್ ಅನ್ವೇಷಣ್’ ಕಾರ್ಯಗಾರದಲ್ಲಿ ಸಾರ್ವಜನಿಕರಿ ಗಾಗಿ ವೈದ್ಯರ 8 ಗೋಲ್ಡನ್ ಸಲಹೆಗಳ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಯಿತು.

ನಮ್ಮ ದೇಹದಲ್ಲಿ ಮಿದುಳು ಮತ್ತು ಹೃದಯದಂತೆ ಕಿಡ್ನಿ ತುಂಬ ಸೂಕ್ಷ್ಮ. ಇದು ಅತಿಹೆಚ್ಚು ಕಾರ್ಯನಿರ್ವಹಿಸುವ ಅಂಗ. ರಕ್ತ ಶುದ್ಧಿ ಕಾರ್ಯ ನಂತರ ಮೂತ್ರದ ಮೂಲಕ ತ್ಯಾಜ್ಯ ಹೊರಹಾಕಲು ಹಾಗೂ ಖನಿಜಗಳನ್ನು ಸಮತೋಲನಗೊಳಿಸುವ ಜತೆಗೆ ದೇಹದಲ್ಲಿ ದ್ರವದ ಪ್ರಮಾಣ ಸಮತೋಲನವಾಗಿರುವಂತೆ ಮೂತ್ರಪಿಂಡ ಎಚ್ಚರಿಕೆ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (ಸಿಕೆಡಿ) ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಡಾ. ರವಿ ಜಂಗಮಣಿ ಹೇಳಿದರು.

ಮಧುಮೇಹದಿಂದ ಶೇ.30 ಸಮಸ್ಯೆ: ಭಾರತದಲ್ಲಿ ಶೇ.30 ಜನರು ಮಧುಮೇಹದಿಂದ, ಶೇ.17 ಜನರು ಅಶುದ್ಧ ಕುಡಿಯುವ ನೀರು ಸೇವನೆಯಿಂದ ಹಾಗೂ ಶೇ.17 ಜನರು ರಕ್ತದೊತ್ತಡದಿಂದ ಕಿಡ್ನಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ವಿಶ್ವದಲ್ಲಿ 10 ಜನರಲ್ಲಿ ಒಬ್ಬರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇ.17 ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ.10ರಿಂದ 12 ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಆದರೆ, ಜನಸಂಖ್ಯೆ ಆಧಾರದಲ್ಲಿ ಮೂಲಸೌಕರ್ಯ ಕೊರತೆಯ ಕಾರಣ ಸುಧಾರಿತ ಚಿಕಿತ್ಸೆಗಳು ಸಿಗುತ್ತಿಲ್ಲ ಎಂದು ಮಣಿಪಾಲ್ ಹೆಲ್ತ್ ಎಂಟರ್​ಪ್ರೖೆಸಸ್ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಬೇಸರ ವ್ಯಕ್ತಪಡಿಸಿದರು.

ಮಣಿಪಾಲ್ ಆಸ್ಪತ್ರೆಯ ಕಿಡ್ನಿ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ್ ಸಿದ್ದಿನಿ, ಡಾ. ಗೌತಮ್ುಮಾರ್, ಪತ್ರಕರ್ತ ಶಿವಾನಂದ ತಗಡೂರು ಮತ್ತಿತರರಿದ್ದರು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಸುಸ್ತು, ತಲೆಸುತ್ತು, ಕಾಲಿನಲ್ಲಿ ಊತ, ಮೂತ್ರ ವಿಸರ್ಜನೆ ಮಾಡುವಾಗ ಉರಿ, ಸೊಂಟ ಮತ್ತು ಮಂಡಿ ನೋವು, ಹೊಟ್ಟೆ ಹಸಿವು ಇಲ್ಲದಿರುವುದು, ವಾಂತಿ, ತ್ವಚೆಯಲ್ಲಿ ತುರಿಕೆ, ಚಿಕ್ಕ ವಯಸ್ಸಿನಲ್ಲೇ ರಕ್ತದೊತ್ತಡ ಇವು ಕಿಡ್ನಿ ಸಮಸ್ಯೆಯ ಲಕ್ಷಣಗಳು.

ಪ್ರಾಥಮಿಕ ಹಂತದಲ್ಲೇ ಕಿಡ್ನಿ ಸಮಸ್ಯೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣವಾಗುತ್ತದೆ. ಇಲ್ಲವಾದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಕನಿಷ್ಠ ಮಟ್ಟಕ್ಕಿಳಿದು, ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಹೊರಹಾಕಲು ಅಸಮರ್ಥವಾಗುತ್ತವೆ. ಆಗ ಹಿಮೋ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಕಿಡ್ನಿ ಕಸಿ ಮಾಡಿದರೆ ರೋಗಿ 10 ವರ್ಷಕ್ಕಿಂತ ಹೆಚ್ಚು ಕಾಲ ಬದುಕಬಹುದು. | ಡಾ. ಸುದರ್ಶನ್ ಬಲ್ಲಾಳ್ ಮಣಿಪಾಲ್ ಆಸ್ಪತ್ರೆ ಚೇರ್ಮನ್ ಕಾರ್ಯಾಗಾರದಲ್ಲಿ ಪಾಲ್ಗೊಂಡ ಬಳಿಕ ಮೂತ್ರಪಿಂಡ ಸಮಸ್ಯೆ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡೆ. ದೈಹಿಕವಾಗಿ ಆರೋಗ್ಯವಾಗಿದ್ದರೆ ಕಾಯಿಲೆಗಳು ಬರುವುದಿಲ್ಲ. ಜನರು ಸೌಂದರ್ಯ ರಕ್ಷಣೆಗೆ ತೋರುವ ಕಾಳಜಿಯನ್ನು ಆರೋಗ್ಯ ರಕ್ಷಣೆಗೂ ಕೊಡಬೇಕು. | ಅನುಶ್ರೀ ಕಿರುತರೆ ನಿರೂಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net