

ಬೆಂಗಳೂರು: ಬ್ರೖೆಲ್... ಇದು ದೃಷ್ಟಿಹೀನರು ಬಳಸುವ ಸ್ಪರ್ಶ ಬರವಣಿಗೆಯ ವ್ಯವಸ್ಥೆ. ವಿಶೇಷಚೇತನರು ಅಥವಾ ಕಡಿಮೆ ದೃಷ್ಟಿ ಹೊಂದಿರುವವರು ಉಬ್ಬು ಕಾಗದದ ಮೇಲೆ ಅಥವಾ ಕಂಪ್ಯೂಟರ್ ಇಲ್ಲವೆ ಸ್ಮಾರ್ಟ್ಫೋನ್ ಸಾಧನಗಳಿಂದ ಬ್ರೖೆಲ್ ಡಿಸ್ಪ್ಲೇಗಳನ್ನು ಬಳಸುವ ಮೂಲಕ ಓದಬಹುದು, ಸಂವಹನ ನಡೆಸಬಹುದು. ಆರಂಭಿಕ ಶಿಕ್ಷಣವನ್ನು ಬ್ರೖೆಲ್ ಲಿಪಿಯಲ್ಲಿ ಕಲಿಯುವ ದೃಷ್ಟಿ ವಿಶೇಷಚೇತನರಿಗೆ ಗ್ರಹಿಕಾ ಸಾಮರ್ಥ್ಯ ಹೆಚ್ಚಿರುತ್ತದೆ.
ಈ ದೃಷ್ಟಿ ವಿಶೇಷಚೇತನರಲ್ಲಿ ಸಾಕ್ಷರತೆ, ಶಿಕ್ಷಣ ಮತ್ತು ಉದ್ಯೋಗಕ್ಕೆ ಬ್ರೖೆಲ್ ಶಿಕ್ಷಣ ನಿರ್ಣಾಯಕವಾಗಿದೆ. ಹೊಸ ತಂತ್ರಜ್ಞಾನಗಳ ವಿಕಾಸದ ಹೊರತಾಗಿಯೂ ಮಾಹಿತಿಯನ್ನು ಗಟ್ಟಿಯಾಗಿ ಓದುವ ಸ್ಕ್ರೀನ್ ರೀಡರ್ ಸಾಫ್ಟ್ವೇರ್ ಸೇರಿ ಬ್ರೖೆಲ್ ಅಂಧರಿಗೆ ಕಾಗುಣಿತ, ವಿರಾಮಚಿಹ್ನೆ, ಲಿಖಿತ ಭಾಷೆ ಮತ್ತಿತರ ಅಂಶಗಳನ್ನು ಆಡಿಯೋ ಮೂಲಕವೂ ಪರಿಚಯಿಸುತ್ತದೆ.
ಬ್ರೖೆಲ್ ಲಿಪಿಯನ್ನು ಆವಿಷ್ಕಾರ ಮಾಡಿದ ಲೂಯಿಸ್ ಬ್ರೖೆಲ್ ಅವರ ಜನ್ಮದಿನ 1809ರ ಜನವರಿ 4. ಈ ದಿನವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ವಿಶ್ವ ಬ್ರೖೆಲ್ ದಿನವನ್ನಾಗಿ ಆಚರಿಸಲು 2018ರಲ್ಲಿ ನಿರ್ಧರಿಸಿತು. 2019ರ ಜ. 4ರಂದು ಮೊದಲ ವಿಶ್ವ ಬ್ರೖೆಲ್ ದಿನ ಆಚರಿಸಲಾಯಿತು. ಬ್ರೖೆಲ್ ಸಾಕ್ಷರತೆಯನ್ನು ಉತ್ತೇಜಿಸುವುದು, ಇತರರಂತೆ ತಾವೂ ಮಾಹಿತಿ, ಶಿಕ್ಷಣ ಪಡೆಯಲು ದೃಷ್ಟಿಹೀನ ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ದಿನದ ಉದ್ದೇಶ. ಬ್ರೖೆಲ್ನ ಮಹತ್ವದ ಕುರಿತು ಈ ದಿನದಂದು ಜಾಗೃತಿ ಮೂಡಿಸಲಾಗುತ್ತದೆ.
ಬ್ರೖೆಲ್ ಲಿಪಿ 1951ರಲ್ಲಿ ಭಾರತವನ್ನು ಪ್ರವೇಶಿಸಿತು. ಕೆಲವು ಸಾಂಕೇತಿಕ ಬದಲಾವಣೆಗಳೊಂದಿಗೆ ಕನ್ನಡವೂ ಸೇರಿ ಭಾರತೀಯ ಭಾಷೆಗಳಲ್ಲಿ ಬ್ರೖೆಲ್ ಲಿಪಿಯನ್ನು ಅಳವಡಿಸಲಾಯಿತು. ಕಾಲ ಕಳೆದಂತೆ ಬ್ರೖೆಲ್ ಲಿಪಿಯನ್ನು ಗಣಕಯಂತ್ರಕ್ಕೂ ಅಳವಡಿಸಿ, ಬ್ರೖೆಲ್ ಮುದ್ರಣ ಯಂತ್ರಗಳಿಂದ ಅನೇಕ ಪುಸ್ತಕಗಳನ್ನು ಮುದ್ರಿಸಲಾಯಿತು. ಪ್ರಸ್ತುತ ಅಂಧರಿಗಾಗಿ ಪುಸ್ತಕ, ಶೈಕ್ಷಣಿಕ ಸಾಮಗ್ರಿ, ಬ್ಲೈಂಡ್ ಸ್ಟಿಕ್ ಇತ್ಯಾದಿ ವಸ್ತುಗಳು ಉತ್ತರಾಖಂಡದ ಡೆಹ್ರಾಡೂನ್ನಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಶುವಲ್ ಹ್ಯಾಂಡಿಕ್ಯಾಪ್ (ಎನ್ಐವಿಎಚ್) ಮುಖಾಂತರ ದೇಶಾದ್ಯಂತ ಪೂರೈಸಲಾಗುತ್ತಿದೆ.
ಬ್ರೖೆಲ್ ಲಿಪಿಗೆ ಮಾನ್ಯತೆ ಪಡೆಯುವಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾದವು. ಮೊದಲಿಗೆ ಶಿಕ್ಷಣ ತಜ್ಞರು ಬ್ರೖೆಲ್ ಭಾಷೆಯನ್ನು ಗುರುತಿಸಲೇ ಇಲ್ಲ. ಬೆರಳುಗಳು ಪುಸ್ತಕದ ಪುಟಗಳ ಮೇಲೆ ಚಲಿಸುವಂತೆ ಮಾಡಿ ಅದನ್ನು ಸ್ಪರ್ಶಿಸುತ್ತಾ ಅವರಿಗೆ ಅಕ್ಷರದ ಆಕಾರ ಹಾಗೂ ಅದರ ರೂಪವನ್ನು ಗುರುತಿಸುತ್ತಾ ಸಾಗುವಂತೆ ಮಾಡಬೇಕು. ಆಗ ಅವರು ಈ ಬ್ರೖೆಲ್ ಆಕ್ಷರಗಳನ್ನು ಕಲಿಯುತ್ತಾ ಹೋಗುತ್ತಾರೆ. ಆದರೆ ಈ ಲಿಪಿ ಅಧಿಕೃತ ಮನ್ನಣೆ ಪಡೆಯುವುದನ್ನು ಲೂಯಿಸ್ ಕಣ್ಣಾರೆ ನೋಡಲು ಸಾಧ್ಯವಾಗಲಿಲ್ಲ. ಅವರು ಮೃತಪಟ್ಟ ನೂರು ವರ್ಷಗಳ ನಂತರ ಈ ಭಾಷೆಗೆ ಮಾನ್ಯತೆ ದೊರೆಯಿತು.
ದೃಷ್ಟಿ ವಿಶೇಷಚೇತನರಿಗೆ ಬಸ್ಸು, ರೈಲುಗಳಲ್ಲಿ ನಿರ್ದಿಷ್ಟ ಸ್ಥಳ ಮೀಸಲಿಡಬೇಕು. ಆಸ್ಪತ್ರೆ, ನ್ಯಾಯಾಲಯ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ಸುಗಮವಾಗಿ ಓಡಾಡಲು ಅನುಕೂಲವಾಗುವಂತೆ ಪೂರಕ ಸೌಲಭ್ಯ ಹಾಗೂ ಪರಿಕರಗಳನ್ನು ಒದಗಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳು, ಕನ್ನಡ ಸಾಹಿತ್ಯ ಗ್ರಂಥಗಳು ಹೆಚ್ಚೆಚ್ಚು ಬ್ರೖೆಲ್ ಲಿಪಿಯಲ್ಲಿ ಮುದ್ರಣವಾಗಬೇಕು. | ಡಾ. ಮಹಾಂತೇಶ್ ಅಧ್ಯಕ್ಷ, ಸಮರ್ಥನಂ ಟ್ರಸ್ಟ್
ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ವಿಶೇಷಚೇತನರಿದ್ದು, ಅವರಲ್ಲಿ ಸುಮಾರು 4 ಲಕ್ಷ ದೃಷ್ಟಿ ವಿಶೇಷಚೇತನರಿದ್ದಾರೆ. ಆದರೆ ಇವರಲ್ಲಿ ಬಹುತೇಕರಿಗೆ ಶಿಕ್ಷಣ ಪಡೆಯುವ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ತಂತ್ರಜ್ಞಾನ ಬೆಳೆದಿದ್ದರೂ, ಬ್ರೖೆಲ್ ಲಿಪಿ ಸೇರಿ ವಿಶೇಷಚೇತನರಿಗೆ ಶಿಕ್ಷಣ ಪಡೆಯಲು ಇರುವ ಅವಕಾಶಗಳು ಹಾಗೂ ಸೌಲಭ್ಯಗಳ ಕುರಿತು ಸಮರ್ಪಕ ಮಾಹಿತಿ ಇಲ್ಲ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಡಬೇಕಿದೆ ಎನ್ನುತ್ತಾರೆ ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಮಹಾಂತೇಶ್.