ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 6,500 ರೂ.ಗೂ ಅಧಿಕ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರವೆಷ್ಟು? Today Gold Rate

Today Gold Rate
Published on

Today Gold Rate : ಭಾರತದಲ್ಲಿ ಚಿನ್ನಕ್ಕೆ ಯಾವಾಗಲೂ ಒಂದು ವಿಶೇಷ ಸ್ಥಾನವಿದೆ. ಹಬ್ಬಗಳು, ಮದುವೆ ಸಮಾರಂಭಗಳು ಸೇರಿದಂತೆ ಇನ್ನಿತರ ಆಚರಣೆಗಳು ಮತ್ತು ಶುಭ ಸಂದರ್ಭಗಳಲ್ಲಿ ಮಹಿಳೆಯರು ವಿಶೇಷವಾಗಿ ಚಿನ್ನ ಖರೀದಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿದ್ದು, ಮಧ್ಯಮ ವರ್ಗದವರ ಕೈಗೆ ಎಟುಕದಂತಾಗಿದೆ. ಬೆಲೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿರುವ ಹಳದಿ ಲೋಹ, ಪ್ರಸ್ತುತ ಇಳಿಕೆ ಕಾಣುತ್ತಿರುವುದು ಸಿಹಿ ಸುದ್ದಿಯಾಗಿದೆ.

ಮಂಗಳವಾರ (ಮೇ 20) 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 450 ರೂಪಾಯಿ ಕುಸಿದರೆ, 24 ಕ್ಯಾರೆಟ್ ಚಿನ್ನದ ಬೆಲೆ 490 ರೂ. ಕುಸಿದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಕುಸಿತಕಂಡಿದೆ. ಒಂದು ಕೆಜಿ ಬೆಳ್ಳಿ 1,000 ರೂಪಾಯಿಯಷ್ಟು ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕಡಿಮೆಯಾಗಿದ್ದು, ಒಂದು ಔನ್ಸ್ ಬೆಲೆ 3,217 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ಗಮನಾರ್ಹ ಸಂಗತಿ ಏನೆಂದರೆ, ಕೆಲವೇ ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಗರಿಷ್ಠ ಮಟ್ಟದಿಂದ ಬರೋಬ್ಬರಿ 6,513 ರೂ.ಗಳ ಒಟ್ಟು ಕುಸಿತ ಕಂಡಿದೆ. ತಿಂಗಳ ಹಿಂದಷ್ಟೇ ಚಿನ್ನದ ಬೆಲೆ 1 ಲಕ್ಷ ರೂ.ಗಳ ಸಾರ್ವಕಾಲಿಕ ದಾಖಲೆ ಬರೆದಿತ್ತು. ಕಳೆದ ವಾರದಲ್ಲಿ ಗಮನಾರ್ಹ ಬೆಲೆ ಏರಿಳಿತಗಳ ಹೊರತಾಗಿಯೂ, ಒಟ್ಟಾರೆ ಟ್ರೆಂಡ್​ ಸದ್ಯಕ್ಕೆ ಸ್ಥಿರವಾಗಿದೆ. ಚಿನ್ನ ಪ್ರಸ್ತುತ ಇಳಿಕೆಯ ಹಾದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಲಿದೆ.

ಅಂದಹಾಗೆ, ಹೈದರಾಬಾದ್, ವಿಜಯವಾಡ, ಬೆಂಗಳೂರು, ಚೆನ್ನೈ ಮತ್ತು ಮುಂಬೈಗಳಲ್ಲಿ 10 ಗ್ರಾಂ 22 ಕ್ಯಾರೆಟ್​ ಚಿನ್ನದ ಬೆಲೆ 87,100 ರೂ. ಇದ್ದರೆ, 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 95,020 ರೂ. ಇದೆ. ಸೋಮವಾರದ ಬೆಲೆಗಳಿಗೆ ಹೋಲಿಸಿದರೆ ಇಂದು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 450 ಮತ್ತು 490 ರೂಪಾಯಿ ಕಡಿಮೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಕಡಿಮೆಯಾಗಿದೆ. ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 450 ರೂ. ಇಳಿಕೆಯಾಗಿ 87,250 ರೂ.ಗೆ ತಲುಪಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 490 ರೂ. ಇಳಿಕೆಯಾಗಿ 95,170 ರೂ.ಗೆ ತಲುಪಿದೆ.

ಇನ್ನು ತಜ್ಞರು ಹೇಳುವಂತೆ ಇತ್ತೀಚೆಗೆ, ಹೂಡಿಕೆದಾರರು ಸ್ಥಿರ ಆದಾಯವನ್ನು ನೀಡುವ ಸರಕು ಮಾರುಕಟ್ಟೆಗಳತ್ತ ವಾಲುತ್ತಿದ್ದು, ಇದರ ಭಾಗವಾಗಿ ಚಿನ್ನದ ಬೆಲೆಯಲ್ಲಿ ಬದಲಾವಣೆಗಳು ಉಂಟಾಗುತ್ತಿವೆ. ಅಲ್ಲದೆ, ಜಾಗತಿಕ ವ್ಯಾಪಾರ ಯುದ್ಧದ ಸಡಿಲಿಕೆ ಮತ್ತು ಚಿನ್ನದಂತಹ ಸುರಕ್ಷಿತ ಸ್ವತ್ತುಗಳ ಬೇಡಿಕೆ ಕುಸಿತದಿಂದಾಗಿ ಚಿನ್ನದ ದರ ಕ್ರಮೇಣ ಕುಸಿಯುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net