58 ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ: 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯತ್​ನ 1185 ವಾರ್ಡ್​ಗಳಲ್ಲಿ ಚುನಾವಣೆ ರಂಗು

Election
Published on

ಬೆಂಗಳೂರು: 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ನಾನಾ ಕಾರಣಗಳಿಂದ ತೆರವಾಗಿರುವ 1,264 ಗ್ರಾಪಂ ಸದಸ್ಯ ಸ್ಥಾನಗಳಿಗೆ ಸೋಮವಾರ ಮತದಾನ ನಡೆಯಲಿದೆ. 2019ರಲ್ಲಿ ಅವಧಿ ಪೂರ್ಣಗೊಂಡ ಹಾಗೂ 2021ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ 51 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಯ 1185 ವಾರ್ಡ್​ಗಳಿಗೆ ಮತದಾನ ನಡೆಯಲಿದೆ.

ಎಲ್ಲೆಲ್ಲಿ ಚುನಾವಣೆ?: 2019ರಲ್ಲಿ ಅವಧಿ ಪೂರ್ಣಗೊಂಡ ಚಿಕ್ಕಮಗಳೂರು, ಶಿರಾ, ಗದಗ-ಬೆಟಗೇರಿ, ಹೊಸಪೇಟೆ, ನಗರಸಭೆ, ಅಥಣಿ, ಅಣ್ಣಿಗೇರಿ, ಬಂಕಾಪುರ ಪುರಸಭೆ, 2021ರಲ್ಲಿ ಅವಧಿ ಮುಕ್ತಾಯಗೊಂಡ ಹೆಬ್ಬಗೋಡಿ ನಗರಸಭೆ, ಜಿಗಣಿ, ಚಂದಾಪುರ, ಬಿಡದಿ, ಮಲೆಬೆನ್ನೂರು, ಕಾಪು, ಹಾರೋಗೇರಿ, ಮುಗಳಖೋಡ, ಮುನವಳ್ಳಿ, ಉಗಾರಖುರ್ದ, ಕಾರಟಗಿ, ಕುರೇಕುಪ್ಪ, ಕುರಗೋಡು, ಹಗರಿಬೊಮ್ಮನಹಳ್ಳಿ, ಮಸ್ಕಿ, ಕೆಂಬಾವಿ, ಕಕ್ಕೇರ ಪುರಸಭೆೆ ಮತ್ತು ನಾಯಕನಹಟ್ಟಿ, ವಿಟ್ಲ, ಕೋಟೆಕಾರು, ಎಂ.ಕೆ.ಹುಬ್ಬಳ್ಳಿ, ಕಂಕನವಾಡಿ, ನಾಗನೂರ, ಯಕ್ಸಾಂಬ, ಚನ್ನಮ್ಮನ ಕಿತ್ತೂರು, ಅರಭಾವಿ, ಐನಾಪುರ, ಶೇಡಬಾಳ, ಚಿಂಚಿಲಿ, ಬೋರಗಾಂವ, ಕಲ್ಲೋಳ್ಳಿ, ನಲತವಾಡ, ನಿಡಗುಂದಿ, ದೇವರಹಿಪ್ಪರಗಿ, ಆಲಮೇಲ, ಮನಗೂಳಿ, ಕೋಲ್ಹಾರ, ಕಮತಗಿ, ಬೆಳಗಲಿ, ಅಮೀನಗಡ, ಗುತ್ತಲ, ಜಾಲಿ, ತಾವರಗೇರಾ, ಕೂಕನೂರ, ಭಾಗ್ಯನಗರ, ಕನಕಗಿರಿ, ಮರಿಯಮ್ಮನಹಳ್ಳಿ, ಕವಿತಾಳ, ತುರ್ವಿಹಾಳ, ಬಳಗನೂರು, ಸಿರವಾರ ಪಟ್ಟಣ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಉಪ ಚುನಾವಣೆ ಎಲ್ಲೆಲ್ಲಿ?: ಕೊಳ್ಳೇಗಾಲ ನಗರಸಭೆಯ 6 ವಾರ್ಡ್, ಹರಿಹರ ನಗರಸಭೆಯ 21, ದಾಂಡೇಲಿ ನಗರಸಭೆಯ 18, ಗೌರಿಬಿದನೂರು ನಗರಸಭೆಯ 10 ವಾರ್ಡ್​ಗಳಿಗೆ, ಮೂಡಲಗಿ ಪುರಸಭೆಯ 9, ಸೇಡಂಚಡಚಣ ಪಟ್ಟಣ ಪಂಚಾಯಿತಿಯ 4, ಸೇಡಂ ಪುರಸಭೆಯ 13, ಹಾನಗಲ್ ಪುರಸಭೆಯ 19 ಹಾಗೂ ಜಮಖಂಡಿ ನಗ ರಸಭೆಯ 9 ವಾರ್ಡ್​ಗಳಿಗೆ ಉಪ ಚುನಾವಣೆ ನಡೆಯಲಿದೆ. ಅವಧಿ ಮುಕ್ತಾಯವಾಗುವ, ನ್ಯಾಯಾಲಯ ಪ್ರಕರಣ, ಇತರೆ ಕಾರಣಗಳಿಂದ ಸದಸ್ಯರು ಆಯ್ಕೆಯಾಗದ ಹಾಗೂ ನಾನಾ ಕಾರಣಗಳಿಂದ ತೆರವಾಗಿರುವ 1264 ಗ್ರಾಪಂ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.

ಮಾರ್ಗಸೂಚಿ ಪಾಲನೆಗೆ ಸೂಚನೆ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲ ಹಂತದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆಯೋಗ ಸೂಚಿಸಿದೆ.

ನೋಟಾಕ್ಕೂ ಅವಕಾಶ ಉಂಟು: ಮತದಾರರಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು, ಮತಪತ್ರಗಳಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ. ನೋಟಾ ಚಲಾವಣೆಗೂ ಅವಕಾಶವಿದೆ.

  • ಮತದಾನ ಸಮಯ ಬೆಳಗ್ಗೆ 7-ಸಂಜೆ 5.
  • ಮತ ಎಣಿಕೆ ಡಿಸೆಂಬರ್ 30
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net