

ಪಂಕಜ ಕೆ.ಎಂ
ಬೆಂಗಳೂರು: ದೇವಾಲಯಗಳ ಆವರಣ ಹಾಗೂ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಗಳ ಸುತ್ತಮುತ್ತ ಬೀಡಿ, ಸಿಗರೇಟ್, ಪಾನ್ ಮಸಾಲ, ಗುಟ್ಕಾ ದಂತಹ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ. ಈ ನಿಯಮ ಇಲಾಖೆ ವ್ಯಾಪ್ತಿಯ ಎಲ್ಲಾ 33 ಸಾವಿರ ದೇವಾಲಯಗಳಿಗೂ ಅನ್ವಯ ಆಗಲಿದೆ.
ದೇವಾಲಯದ ಹೊರಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗಿದ್ದು, ಗುಟ್ಕಾ ತಿಂದು ಕಾಂಪೌಂಡ್ ಸುತ್ತಮುತ್ತ ಉಗಿಯುತ್ತಾರೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಬಳಕೆಗೆ ನಿಷೇಧವಿದ್ದರೂ, ಬಳಕೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರ ಭಾವನೆಗೆ ಧಕ್ಕೆ ಆಗುವುದು ಮಾತ್ರವಲ್ಲದೆ ಕಿರಿಕಿರಿಯಾಗುತ್ತಿದೆ. ಈ ಸಂಬಂಧ ಇಲಾಖೆಗೆ ಹಾಗೂ ದೇವಾಲಯಗಳಿಗೂ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ತಾಣಗಳಿಗೂ ವಿಸ್ತರಣೆ:
ಈಗಾಗಲೇ ಶಾಲಾ ಕಾಲೇಜುಗಳ ಆವರಣದಿಂದ ಸುಮಾರು ನೂರು ಮೀಟರ್ ವರೆಗೂ ಯಾವುದೇ ಅಂಗಡಿಗಳಲ್ಲಿ ಬೀಡಿ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಜಾರಿಯಲ್ಲಿದೆ. ಇದೀಗ ಆ ನಿಯಮವನ್ನು ಧಾರ್ಮಿಕ ತಾಣಗಳಿಗೂ ವಿಸ್ತರಿಸಲಾಗುತ್ತಿದೆ. ಆ ಮೂಲಕ ದೇವಾಲಯಗಳನ್ನು ಕೇವಲ ಶ್ರದ್ಧಾ ಕೇಂದ್ರವಷ್ಟೇ ಆಗಿಸದೆ, ಸ್ವಚ್ಛತಾ ಹಾಗೂ ಆರೋಗ್ಯಕರ ತಾಣಗಳನ್ನಾಗಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಎಚ್ಚರಿಕೆ ಪಾಲಿಸದಿದ್ದರೆ ಕ್ರಮ:
ದೇವಾಲಯಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಹಾಗೂ ಅವುಗಳನ್ನು ಬಳಸದಂತೆ ಸೂಚನೆಯ ಜೊತೆಗೆ ಆದೇಶದ ಮೂಲಕ ಎಚ್ಚರಿಕೆ ನೀಡಲಾಗುವುದು. ಆದಾಗಿಯೂ ನಿಯಮ ಪಾಲನೆ ಮಾಡದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮೊಬೈಲ್ ನಿಷೇಧ:
ಈ ಹಿಂದೆ ದೇವಾಲಯಗಳಲ್ಲಿ ಮೊಬೈಲ್ ಬಳಕೆಯಿಂದಾಗಿ ಅರ್ಚಕರು ಸೇರಿ ಹಲವು ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಗಂಟೆಗಟ್ಟಲೆ ಸರದಿಯಲ್ಲಿ ಸಾಗಿ ಬಂದವರಿಗೆ ಮೊಬೈಲ್ ಹಾವಳಿಯಿಂದ ಸರಿಯಾಗಿ ದೇವರ ದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ದೇವಾಲಯಗಳಲ್ಲಿ ದೇವರ ದರ್ಶನ ವೇಳೆ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಅದೇ ರೀತಿ ಸ್ವಚ್ಛತೆ ದೃಷ್ಟಿಯಿಂದ ಪ್ಲಾಸ್ಟಿಕ್ ಬಳೆಕೆಗೂ ಕಡಿವಾಣ ಹಾಕಲಾಗಿದೆ.
ಮಕ್ಕಳ ಹಾಲುಣಿಸುವ ಕೇಂದ್ರ:
ದೇವಾಲಯಗಳಿಗೆ ಬರುವ ಬಹಳಷ್ಟು ಭಕ್ತರು ಎಳೆಯ ಮಕ್ಕಳೊಂದಿಗೆ ಹರಕೆ ತೀರಿಸುವುದು ಸೇರಿ ನಾನಾ ಕೋರಿಕೆಗಳೊಂದಿಗೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಾಲುಣಿಸಲು ಸಮಸ್ಯೆ ಆಗುತ್ತಿತ್ತು. ಅದಕ್ಕಾಗಿ ದೇವಾಲಯಗಳ ಆವರಣದಲ್ಲಿ ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಹಾಲುಣಿಸುವ ಕೇಂದ್ರ ತೆರೆಯಲಾಗಿದೆ.