

ಎನ್.ಆರ್.ಪುರ: ಸಿಂಸೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮೀಪದ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ಚಿಕ್ಕಮಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ದಾಳಿ ನಡೆಸಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂಗಡಿ ಮಾಲೀಕರಿಂದ 2,200 ರೂ. ದಂಡ ವಸೂಲಿ ಮಾಡಲಾಯಿತು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು. ದಾಳಿ ಸಂದರ್ಭದಲ್ಲಿ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸೇವ್ಯಾ ನಾಯಕ್, ಪಪಂ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೆಬಾಸ್ಟಿನ್, ಪ್ರೇಮ್‌ಕುಮಾರ್, ಕಾನ್ಸ್‌ಟೇಬಲ್ ಪಿ.ರಾಜಶೇಖರ್ ಇದ್ದರು.