ಪರ್ಸೆಂಟೇಜ್​ಗೆ ಬ್ರೇಕ್!; ಅಕ್ರಮಕ್ಕೆ ಕಡಿವಾಣ, ಬಿಲ್ ಪಾವತಿಗೆ ಹೊಸ ವ್ಯವಸ್ಥೆ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಪರ್ಸೆಂಟೇಜ್ ವ್ಯವಹಾರಕ್ಕೆ ಅಂತ್ಯಹಾಡುವ ನಿರ್ಧಾರಕ್ಕೆ ಬಂದಿರುವ ರಾಜ್ಯ ಸರ್ಕಾರ, ಎಲ್ಲ ವ್ಯವಹಾರಗಳಿಗೆ ಕಡಿವಾಣ ಹಾಕುವುದಕ್ಕಾಗಿ ಕಾಮಗಾರಿಗಳ ಬಿಲ್ ಪಾವತಿ ವ್ಯವಸ್ಥೆಗೆ ಪ್ರತ್ಯೇಕ ಕಾಯ್ದೆಯನ್ನೇ ತರಲು ಮುಂದಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಶೇ.40 ಪರ್ಸೆಂಟೇಜ್ ಆರೋಪ ಮಾಡಿ ಪ್ರಧಾನಿವರೆಗೆ ದೂರು ತೆಗೆದುಕೊಂಡು ಹೋಗಿದೆ. ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗೆ ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲು ಗಂಭೀರವಾಗಿ ಪರಿಶೀಲನೆ ನಡೆದಿದೆ.

ಪಾರದರ್ಶಕ ವ್ಯವಸ್ಥೆ: ಟೆಂಡರ್ ಆಹ್ವಾನದಿಂದ ಹಿಡಿದು ಬಿಲ್ ಪಾವತಿಯ ತನಕ ಭ್ರಷ್ಟಾಚಾರ ಮಿತಿ ಮೀರಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಬಿಲ್ ಪಾವತಿಗೆ ಒಂದಷ್ಟು ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈಗ ಇನ್ನಷ್ಟು ಬಿಗಿ ಕ್ರಮ ಕೈಗೊಂಡು ಪಾರದರ್ಶಕ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ತರಲಾಗುತ್ತಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವೆ ನಡೆಯುವ ಕಳ್ಳವ್ಯವಹಾರಗಳಿಗೆ ಕಾಯ್ದೆಯ ಮೂಲಕ ಕಡಿವಾಣ ಹಾಕಲಾಗುತ್ತದೆ. ಪರ್ಸೆಂಟೇಜ್ ಆರೋಪದ ಹಿನ್ನೆಲೆಯಲ್ಲಿ, ಯಾವ ರೀತಿಯಲ್ಲಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದೆಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.

ಅದರ ಪರಿಣಾಮ ಹೊಸ ಕಾಯ್ದೆ ಸೇರಿದಂತೆ ಒಂದಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಗುತ್ತಿಗೆದಾರರ ಬಿಲ್ ಪಾವತಿಗೆ ಸುಧಾರಿತ ಹಾಗೂ ಪಾರದರ್ಶಕ ವ್ಯವಸ್ಥೆ ತರಲಿದ್ದೇವೆ. ಭ್ರಷ್ಟಾಚಾರದ ಆರೋಪಗಳಿಗೆ ಕಡಿವಾಣ ಹಾಕುವುದು ನಮ್ಮ ಉದ್ದೇಶ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ನಿರ್ಧಾರವಾಗಲಿದೆ.

| ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ

ಬೆಟ್ಟದಂತಿದೆ ಬಾಕಿ: ಒಂದು ಕಡೆ ಅನುದಾನ ಇಲ್ಲದಿದ್ದರೂ ಟೆಂಡರ್ ಕರೆದಿದ್ದರೆ, ಈಗಾಗಲೇ ಕಾಮಗಾರಿ ಮುಗಿದಿರುವ 22 ಸಾವಿರ ಕೋಟಿ ರೂ.ಗಳಷ್ಟು ಬಾಕಿ ಮೊತ್ತದ ಹೊರೆ ಸರ್ಕಾರದ ಮೇಲಿದೆ. ಪರಿಣಾಮ ಹೊಸ ಕಾಮಗಾರಿಗಳಿಗೆ ಗುತ್ತಿಗೆದಾರರು ಹಿಂದೇಟು ಹಾಕುವ ಸ್ಥಿತಿ ನಿರ್ವಣವಾಗಿದೆ. ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ದಿ, ಬಿಬಿಎಂಪಿಗಳಲ್ಲಿ ಬಾಕಿ ಜಾಸ್ತಿ ಇದೆ. ಇಲಾಖೆಗಳ ಸಚಿವರು ಅಸಹಾಯಕರಾಗಿದ್ದಾರೆ. 2018-19 ರಿಂದ ಸರ್ಕಾರದಲ್ಲಿ ಬಿಲ್ ಬಾಕಿ ಹೆಚ್ಚಾಗಿ ಉಳಿಯಲಾರಂಭಿಸಿದೆ.

ಗುತ್ತಿಗೆದಾರರ ಸಲಹೆ

  • ಪ್ಯಾಕೇಜ್ ಪದ್ಧತಿ ರದ್ದು
  • ಅನುದಾನ ಲಭ್ಯತೆ ಆಧಾರದಲ್ಲಿ ಟೆಂಡರ್
  • ಭ್ರಷ್ಟಾಚಾರಕ್ಕೆ ಕಡಿವಾಣ
  • ಗುಣಮಟ್ಟಕ್ಕೆ ಆದ್ಯತೆ
  • ತಂತ್ರಜ್ಞಾನ ಆಧಾರಿತ ವ್ಯವಸ್ಥೆ ತರಬೇಕು
  • ನೆರೆರಾಜ್ಯದ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಬೇಡ
  • 4 ಜಿ ವಿನಾಯಿತಿ ನೀಡದೆ ಟೆಂಡರ್ ಮಾತ್ರ ಇರಲಿ

ತನಿಖೆ ಕಷ್ಟ: ಸರ್ಕಾರ ಪರ್ಸೆಂಟೇಜ್ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ. ಆದರೆ ಲಂಚದ ವಿಚಾರಕ್ಕೆ ಯಾವ ದಾಖಲೆ ಸಿಗುತ್ತದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಟೆಂಡರ್ ಅನುಮೋದನೆಯಿಂದ ಬಿಲ್ ಪಾವತಿಯ ತನಕ ಇರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಮುಖ್ಯವೆಂಬ ಅಭಿಪ್ರಾಯ ಇದೆ.

ಈಗಿನ ವ್ಯವಸ್ಥೆಯಲ್ಲಿ ಗುಣಮಟ್ಟ ಕಾಪಾಡಲು ಆಗುತ್ತಿಲ್ಲ. ಹಿರಿತನದ ಆಧಾರದಲ್ಲಿ ಬಿಲ್ ಪಾವತಿಯಾದರೆ ಅನುಕೂಲ. ಆನ್​ಲೈನ್ ವ್ಯವಸ್ಥೆಗಾಗಿ ಪ್ರತ್ಯೇಕ ಕಾಯ್ದೆ ತಂದರೆ ನಮ್ಮ ಸಂಘ ಸ್ವಾಗತಿಸುತ್ತದೆ. ಈ ಕಾಯ್ದೆ ತರುವ ಮುನ್ನ ತಜ್ಞರು ಗುತ್ತಿಗೆದಾರರ ಜತೆಗೂ ಚರ್ಚೆ ನಡೆಸಬೇಕು.

| ಡಿ. ಕೆಂಪಣ್ಣ ಅಧ್ಯಕ್ಷ, ಗುತ್ತಿಗೆದಾರರ ಸಂಘ

ಎಷ್ಟಿದೆ ಬಾಕಿ?

  • ಲೋಕೋಪಯೋಗಿ ಇಲಾಖೆ: 5000 ಕೋಟಿ ರೂ.
  • ಜಲ ಸಂಪನ್ಮೂಲ ಇಲಾಖೆ: 8000 ಕೋಟಿ ರೂ.
  • ಬಿಬಿಎಂಪಿ: 3000 ಕೋಟಿ ರೂ.
  • ಗ್ರಾಮೀಣಾಭಿವೃದ್ದಿ ಇಲಾಖೆ: 1000 ಕೋಟಿ
  • ಉಳಿದ ಇಲಾಖೆಗಳು: 5000 ಕೋಟಿ (ಅಂದಾಜು)

ಹೊಸ ವ್ಯವಸ್ಥೆ ರೂಪ

  •  ಗುತ್ತಿಗೆದಾರರಿಗೆ ಹಿರಿತನದ ಆಧಾರದಲ್ಲಿ ಬಿಲ್ ಪಾವತಿ
  • ಗುತ್ತಿಗೆದಾರರ ಮನೆಯಲ್ಲಿ ಮದುವೆಯಂತಹ ಸಮಾರಂಭ ಇದ್ದು ದಾಖಲೆ ನೀಡಿದರೆ 25 ಲಕ್ಷ ರೂ.ಗಳ ತನಕ ಮೊತ್ತ ಪಾವತಿ ವಿವೇಚನಾಧಿಕಾರ ಸಚಿವರಿಗೆ
  • ಆನ್​ಲೈನ್ ಮೂಲಕ ಬಿಲ್ ಸಲ್ಲಿಕೆ, ಪಾವತಿಗೆ ಪ್ರತ್ಯೇಕ ಸಾಫ್ಟ್​ವೇರ್
  • ಮ್ಯಾನ್ಯುವಲ್ ಬಿಲ್ ವ್ಯವಸ್ಥೆ ಸಂಪೂರ್ಣ ರದ್ದು
  • ಮೆಜರ್​ವೆುಂಟ್ ಬುಕ್ ರಿಜಿಸ್ಟ್ರಾರ್ (ಎಂಡಿ ಬುಕ್) ಸಹ ಆನ್​ಲೈನ್ ವ್ಯವಸ್ಥೆ, ಗುಣಮಟ್ಟ ಕಾಪಾಡಲು ಸಲ್ಲಿಸುವ ಪ್ರಮಾಣಪತ್ರಕ್ಕೂ ವಿಡಿಯೋ ವ್ಯವಸ್ಥೆ
  • ಎಂಡಿ ಬುಕ್​ಗೆ ರಿಜಿಸ್ಟ್ರಾರ್ ಮಾಡಲು ಜಿಪಿಎಸ್ ವ್ಯವಸ್ಥೆ
  • ಕಾಮಗಾರಿಗಳ ಫೋಟೋ ಮತ್ತು ವಿಡಿಯೋ ಅಪ್​ಲೋಡ್ ವ್ಯವಸ್ಥೆ
  • ಕಾಮಗಾರಿಗಳಿಗೆ ಬಳಸಿರುವ ವಸ್ತುಗಳ ವಿಡಿಯೋ ಮಾಡುವುದು ಕಡ್ಡಾಯ

ಬಿಗಿ ಕ್ರಮ ಏಕೆ?: ಹಿಂದಿನ ಸರ್ಕಾರಗಳು ಅನೇಕ ಕಾಮಗಾರಿಗಳಿಗೆ ಹಣವನ್ನೇ ಮೀಸಲಿಡದೆ ಆಡಳಿತಾತ್ಮಕ ಅನುಮೋದನೆ ನೀಡಿವೆ. ಟೆಂಡರ್ ಸಹ ಕರೆಯಲಾಗಿದೆ. ಸರ್ಕಾರ ವಿವಿಧ ಇಲಾಖೆಗಳಿಂದ ಕ್ರೋಡೀಕರಿಸಿರುವ ಮಾಹಿತಿಯ ಪ್ರಕಾರ ಸುಮಾರು 60 ಸಾವಿರ ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಈಗ ಆ ಕಾಮಗಾರಿಗಳನ್ನು ರದ್ದು ಮಾಡುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಆದೇಶ ನೀಡಿರುವುದರಿಂದ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ. ಆದ್ದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಆಡಳಿತದಲ್ಲಿದ್ದರೂ ದೊಡ್ಡ ಹೊರೆ ಬೀಳಲಿದೆ. ಆದ್ದರಿಂದಲೇ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ.

ಯಾವ ವ್ಯವಸ್ಥೆ ಬರಲಿದೆ?: ಗುತ್ತಿಗೆದಾರರಿಗೆ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಪ್ರತ್ಯೇಕ ಕಾಯ್ದೆ ರೂಪಿಸಲಾಗುತ್ತದೆ. ಬಹುತೇಕ ಮುಂದಿನ ಬಜೆಟ್ ಅಧಿವೇಶನದ ವೇಳೆಗೆ ಕಾಯ್ದೆ ರೂಪುಗೊಳ್ಳಲಿದೆ. ಆ ನಂತರ ಸಾಫ್ಟ್​ವೇರ್ ರೂಪಿಸಿ ಸಂಪೂರ್ಣ ಆನ್​ಲೈನ್ ಮಾಡಿ ಹಿರಿತನದ ಆಧಾರದಲ್ಲಿ ಹಣ ಪಾವತಿ ವ್ಯವಸ್ಥೆ ತರಲಾಗುತ್ತದೆ. ಯಾವುದೇ ರೀತಿಯ ಕೈಬರಹದ ದಾಖಲೆ ಇರುವುದಿಲ್ಲ. ಕಾಮಗಾರಿ ಪರಿಶೀಲನೆಗೂ ಜಿಪಿಎಸ್ ವ್ಯವಸ್ಥೆ ತರಲಾಗುತ್ತದೆ. ಆಗ ಗುತ್ತಿಗೆದಾರರು ರಾಜಕಾರಣಿಗಳು, ಅಧಿಕಾರಿಗಳ ಕೈಬಿಸಿ ಮಾಡಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ವ್ಯವಸ್ಥೆ ಇರುವುದಿಲ್ಲ ಎಂದು ಮೂಲಗಳು ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net