

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ, ರಾಜಕೀಯ ಪಕ್ಷಗಳ ನಡುವಿನ ಹೊಡೆದಾಟ ಹೊಸದಲ್ಲ.
ಇಂದು ಮತ್ತೆ ಅದು ಪುನರಾವರ್ತನೆಗೊಂಡಿದೆ. ಅಂಫಾನ್ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಪರಿಹಾರ ವಿತರಣೆ ಮಾಡುವಾಗ ಗೋಲ್ಮಾಲ್ ಆಗಿದೆ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇಂದು ಪಶ್ಚಿಮ ಬಂಗಾಳದ 24 ಪರಗಣ ಏರಿಯಾದಲ್ಲಿ ನಡೆದ ಪ್ರತಿಭಟನೆ ವೇಳೆ, ಬಿಜೆಪಿ ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದಾರೆ.
ಅಂಫಾನ್ ಚಂಡಮಾರುತದಿಂದ ತೊಂದರೆಗೊಳಗಾದವರಿಗೆ ನೆರವು ನೀಡುವಾಗ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ, ಅಟ್ಯಾಕ್ ಮಾಡಿದ್ದಾರೆಂದು ಹೇಳಲಾಗಿದೆ. ಪೊಲೀಸರೂ ಕೂಡ ನಮ್ಮನ್ನು ಹಿಂಸಿಸಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದಾರೆ.
ಟಿಎಂಸಿ ಗೂಂಡಾಗಳ ಹಲ್ಲೆಯಿಂದ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರ ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡಿದ್ದಾರೆ, ವಾಹನಗಳನ್ನೆಲ್ಲ ಧ್ವಂಸ ಮಾಡಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬರಕ್ಪುರ ಬಿಜೆಪಿ ಸಂಸದ ಅರ್ಜುನ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಿವುಡ್ ಸೂಪರ್ಸ್ಟಾರ್ ಅಜಿತ್ಗೆ ಬೆದರಿಕೆ: ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ
ಟಿಎಂಸಿ ಗೂಂಡಾಗಳು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ನಾವು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದೂ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದ ತೀವ್ರ ಹಾನಿಯಾಗಿದೆ. ಆದರೆ ಅದರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ರಾಜ್ಯಸರ್ಕಾರ ಗೋಲ್ಮಾಲ್ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಅನೇಕರಿಗೆ ಯಾವುದೇ ಹಾನಿಯಾಗದೆ ಇದ್ದರೂ ಪರಿಹಾರ ಧನ ನೀಡಲಾಗಿದೆ. ಮತ್ತೆ ಹಲವರು ನಿಜವಾಗಿಯೂ ಚಂಡಮಾರುತದಿಂದ ಅಪಾರ ಹಾನಿಗೆ ಒಳಗಾಗಿದ್ದರೂ ನೆರವು ಸಿಗಲಿಲ್ಲ ಎಂಬುದು ಬಿಜೆಪಿಯ ಆರೋಪ. (ಏಜೆನ್ಸೀಸ್)