ಟೈಟಾನ್​ ನೌಕೆಯ ಅವಶೇಷಗಳು ವಶಕ್ಕೆ: ಮಾನವನ ದೇಹದ ಭಾಗಗಳೂ ಪತ್ತೆ, ಹೆಚ್ಚಿನ ವಿಶ್ಲೇಷಣೆಗಾಗಿ ರವಾನೆ

Titan Submersible
Published on

ನ್ಯೂಯಾರ್ಕ್​: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆ ಐವರನ್ನು ಹೊತ್ತು ಸಾಗಿದ್ದ ವೇಳೆ ನಾಪತ್ತೆಯಾಗಿದ್ದ ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೃತರ ಅವಶೇಷಗಳು ಇರಬಹುದೆಂದು ಭಾವಿಸಲಾಗಿದೆ ಎಂದು ಅಮೆರಿಕ ಕರಾವಳಿ ಪಡೆ ಬುಧವಾರ ತಿಳಿಸಿದೆ.

ಬಹಳ ಎಚ್ಚರಿಕೆಯಿಂದ ವಶಕ್ಕೆ ಪಡೆಯಲಾಗಿರುವ ಮಾನವ ಅವೇಶಷಗಳೆಂದು ಭಾವಿಸಿರುವುದನ್ನು ಯುನೈಟೆಡ್ ಸ್ಟೇಟ್ಸ್ ವೈದ್ಯಕೀಯ ವೃತ್ತಿಪರರು ಔಪಚಾರಿಕ ವಿಶ್ಲೇಷಣೆಯನ್ನು ನಡೆಸಲಿದ್ದಾರೆ.

ನೌಕೆಯಲ್ಲಿದ್ದ ಐವರು ಯಾರು?

ಟೈಟಾನ್​ ನೌಕೆಯಲ್ಲಿ ಯುನೈಟೆಡ್​ ಕಿಂಗ್​​ಡಮ್​ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್​ ಹರ್ಡಿಂಗ್​ (58), ಫ್ರೆಂಚ್ ಕಡಲ ತಜ್ಞ ಪೌಲ್​ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್​ (48) ಮತ್ತು ಆತನ ಪುತ್ರ ಸುಲೇಮಾನ್​ ದಾವೂದ್​ (19) ಇದ್ದರು.

ನೀರಿನ ಒಳಗೆ ಸಂಭವಿಸಿದ ಅಂತರ್​ಸ್ಫೋಟದಿಂದಾಗಿ ಎಸ್​ಯುವಿ ಕಾರಿನ ಗಾತ್ರದ ಜಲಾಂತರ್ಗಾಮಿ ನೌಕೆ ನಾಶಗೊಂಡು ಐವರು ಮೃತಪಟ್ಟಿದ್ದಾರೆಂದು ನಂಬಲಾಗಿದೆ. ಸಮುದ್ರದಲ್ಲಿ ಆಳಕ್ಕೆ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಅವಘಡ ಸಂಭವಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿತು.

ಇದೀಗ ನಾಶಗೊಂಡ ನೌಕೆಯ ಅವಶೇಷಗಳನ್ನು ಯುಎಸ್​ ಕರಾವಳಿ ಪಡೆ ಪೂರ್ವ ಕೆನಡಾ ಕರಾವಳಿಯಲ್ಲಿ ವಶಕ್ಕೆ ಪಡೆದಿದ್ದು, ಆ ಅವಶೇಷಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಯುಎಸ್​ ಕೋಸ್ಟ್ ಗಾರ್ಡ್ ಕಟ್ಟರ್‌ನಲ್ಲಿ ಯುಎಸ್​ ಪೋರ್ಟ್‌ಗೆ ಕೊಂಡೊಯ್ಯಲಾಗಿದೆ. ಮತ್ತೆ ಇನ್ನೆಂದು ಈ ದುರಂತ ಮರುಕಳಿಸದಂತೆ ತಡೆಯಲು ಮತ್ತು ಪ್ರಸ್ತುತ ದುರಂತಕ್ಕೆ ಕಾರಣ ಏನೆಂದು ತಿಳಿಯಲು ಸಾಕಷ್ಟು ಕೆಲಸ ನಡೆಯಬೇಕಿದೆ ಎಂದು ಯುಎಸ್​ ಪರ ದುರಂತ ತನಿಖೆಯ ನೇತೃತ್ವದ ವಹಿಸಿರುವ ಕ್ಯಾಪ್ಟನ್​ ಜೇಸನ್​ ನ್ಯೂಬೌರ್ ತಿಳಿಸಿದ್ದಾರೆ.

ಟೈಟಾನ್​ ನೌಕೆಯ ಮೂಗಿನಂತಹ ತುದಿ ಮತ್ತು ಎಲೆಕ್ಟ್ರಾನಿಕ್ಸ್​ ಸಾಧನಗಳಿರುವ ಒಂದು ಬದಿಯ ಪ್ಯಾನೆಲ್​ ಮತ್ತು ವೈರ್​ಗಳನ್ನು ಹೊತ್ತು ತಂದ ಹಡಗಿನಿಂದ ಸೆಂಟ್​ ಜಾನ್​ ನ್ಯೂಫೌಂಡ್​ಲ್ಯಾಂಡ್​ನಲ್ಲಿರುವ ಕೆನಡಾದ ಕರಾವಳಿ ಪಡೆ ಟರ್ಮಿನಲ್​ನಲ್ಲಿ ಸಮತಟ್ಟಾದ ಟ್ರಕ್ ಮೇಲೆ ಇಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ನ್ಯೂಯಾರ್ಕ್ ಕಂಪನಿ ಪೆಲಾಜಿಕ್ ರಿಸರ್ಚ್, ತನ್ನ ಒಡಿಸ್ಸಿಯಸ್ ರಿಮೋಟ್-ಚಾಲಿತ ವಾಹನವನ್ನು ಬಳಸಿ ಟೈಟಾನ್​ ನೌಕೆಯ ಅವಶೇಷಗಳನ್ನು ವಶಕ್ಕೆ ಪಡೆದಿದ್ದು, ತನ್ನ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೆನಡಾದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಘಟನೆ ಹಿನ್ನೆಲೆ ಏನು?

ಕಳೆದ ಜೂ.18ರ ಭಾನುವಾರದಂದು ಈ ಘಟನೆ ನಡೆಯಿತು. ಕೆನಾಡದ ನ್ಯೂಫೌಂಡ್​ಲ್ಯಾಂಡ್​ ಕರಾವಳಿ ಭಾಗದಿಂದ ಸುಮಾರು 400 ಮೈಲಿ ದೂರದಲ್ಲಿ ಟೈಟಾನಿಕ ಹಡಗಿನ ಅವಶೇಷಗಳು ಬಿದ್ದಿವೆ. ಅದನ್ನು ನೋಡಲು ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ ಹೋದ ಐವರು ಮೃತಪಟ್ಟಿದ್ದಾರೆ. ಅವರ ಪತ್ತೆಗಾಗಿ ಕಳೆದ ಭಾನುವಾರದಿಂದ ಯುಎಸ್​ ಮತ್ತು ಕೆನಡಾ ಕರಾವಳಿ ಪಡೆ ದಿನದ 24 ಗಂಟೆ ಯುಎಸ್​ ಕನೆಕ್ಟಿಕಟ್‌ ರಾಜ್ಯದ ಎರಡು ಪಟ್ಟು ಗಾತ್ರದ ಪ್ರದೇಶದಲ್ಲಿ ನಿರಂತರ ಕಾರ್ಯಚರಣೆ ನಡೆಸಿತು. ನೌಕೆಯಲ್ಲಿ 96 ಗಂಟೆಗೆ ಆಗುವಷ್ಟು ಆಮ್ಲಜನಕ ಪೂರೈಕೆ ಇತ್ತು. ಒಂದು ಕಡೆ ಆಮ್ಲಜನಕ ಖಾಲಿಯಾಗುತ್ತಿರುವ ಆತಂಕದ ನಡುವೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಆದರೆ, ಅಂತಿಮವಾಗಿ ನೌಕೆಯ ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದ ಐವರು ಮೃತಪಟ್ಟಿರುವುದು ಜೂ. 23ರಂದು ಖಚಿತವಾಯಿತು.

ದುರಂತ ಸಂಭವಿಸಿದ್ಹೇಗೆ?

ಟೈಟಾನ್​ ಹೆಸರಿನ ನೌಕೆಯು ನೀರಿನ ಸೆಳೆತಕ್ಕೆ ಅಂತರ್​ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ. ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬರಲಾಯಿತು. ಸಾಗರದ ಸುಮಾರು 1600 ಅಡಿ (488 ಮೀಟರ್​) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾದವು.

ಇದಕ್ಕೂ ಮುನ್ನ ಯುಎಸ್​ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧವನ್ನು ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಇನ್ನು ಜೀವಂತವಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಅಲ್ಲಿ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ನಂತರದಲ್ಲಿ ತಿಳಿಯಿತು.

ಟೈಟಾನ್​ ನೌಕೆಯ ಬಗ್ಗೆ

ಕಾಣೆಯಾದ ಟೈಟಾನ್​ ಜಲಾಂತರ್ಗಾಮಿ ನೌಕೆ 6.7 ಮೀಟರ್​ ಉದ್ದವಿತ್ತು. ಕಾರ್ಬನ್​ ಫೈಬರ್​ ಮತ್ತು ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿತ್ತು. ಓರ್ವ ಪೈಲಟ್​ ಮತ್ತು ನಾಲ್ವರು ಸಿಬ್ಬಂದಿಯನ್ನು ಗಿರಷ್ಠ 4000 ಮೀಟರ್ ಆಳ (13,120 ಅಡಿ)ದವರೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು. ಓಷನ್​ಗೇಟ್​ ವೆಬ್‌ಸೈಟ್‌ ಪ್ರಕಾರ, ನೌಕೆಯಲ್ಲಿದ್ದ ಆನ್‌ಬೋರ್ಡ್ ಸಿಸ್ಟಮ್, ಸಿಬ್ಬಂದಿಯ ಆರೋಗ್ಯವನ್ನು ಪತ್ತೆಹಚ್ಚಲು ಮತ್ತು ಪೈಲಟ್‌ಗೆ ಅವರೋಹಣವನ್ನು ಗುರುತಿಸಿ, ಸುರಕ್ಷಿತವಾಗಿ ಮೇಲ್ಮೈಗೆ ಮರಳಲು ಸಾಕಷ್ಟು ಸಮಯದ ಮುಂಚೆಯೇ ಆರಂಭಿಕ ಎಚ್ಚರಿಕೆಯನ್ನು ಪತ್ತೆಹಚ್ಚುವ ವ್ಯವಸ್ಥೆಯೂ ಇತ್ತು ಎಂದು ತಿಳಿಸಿದೆ. ಜೂನ್​ 18ರಂದು ಟೈಟಾನಿಕ್ ಹಡಗು ಇರುವ ಕಡೆಗೆ ಧುಮುಕಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್​ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿತು.

ಟೈಟಾನಿಕ್​ ಘಟನೆ ಹಿನ್ನೆಲೆ

1912ರ ಏಪ್ರಿಲ್​ 15ರಂದು ಟೈಟಾನಿಕ್​ ದುರಂತ ಸಂಭವಿಸಿತು. ಸೌತಾಂಪ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್​ ಹಡಗು ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ 400 ಮೈಲು ದೂರದಲ್ಲಿ ಟೈಟಾನಿಕ್‌ ಹಡಗು ದುರಂತದಲ್ಲಿ ಮುಳುಗಡೆಯಾಯಿತು. ಒಂದು ಶತಮಾನಕ್ಕೂ ಅಧಿಕ ಸಮಯದಲ್ಲಿ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳು ಬಿದ್ದಿವೆ. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೇವಲ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net