'ಸಾವಿರ ಹಸು ಕೊಡ್ತೇನೆ, ಟಿಟಿಡಿಗೆ ಸ್ವಂತ ಡೇರಿ ಮಾಡಿ': ಸಿಎಂ ಚಂದ್ರಬಾಬುಗೆ ಪತ್ರ ಬರೆದ ಭಕ್ತ! Tirupati Laddu Row

Tirupati Laddu Row
Published on

ಅಮರಾವತಿ: ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ(Tirupati Laddu Row) ನಕಲಿ ತುಪ್ಪದ ಸಮಸ್ಯೆ ಬಗೆಹರಿಸಲು ಟಿಟಿಡಿಗೆ ಸ್ವಂತ ಡೇರಿ ಸ್ಥಾಪಿಸುವಂತೆ ಬಿಸಿವೈ ಪಕ್ಷದ ಅಧ್ಯಕ್ಷ ರಾಮಚಂದ್ರ ಯಾದವ್ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ತಿರುಪತಿಗೆ ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. 5 ಕೋಟಿ ರೂ.ಗೂ ಹೆಚ್ಚು ಆದಾಯವಿರುವ ಕ್ಷೇತ್ರದಲ್ಲಿ ನಾವೇಕೆ ಸ್ವಂತ ಡೇರಿ ಸ್ಥಾಪಿಸಲು ಸಾಧ್ಯವಿಲ್ಲ? ಇದಕ್ಕೆ ಸರ್ಕಾರ ಸಿದ್ಧವಿದ್ದರೆ ನನ್ನ ಪರವಾಗಿ ಸಾವಿರ ಹಸುಗಳನ್ನು ನೀಡುತ್ತೇನೆ. ಇನ್ನೂ ಒಂದು ಲಕ್ಷ ಹಸುಗಳನ್ನು ಉಚಿತವಾಗಿ ನೀಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಈ ಲಕ್ಷ ಹಸುಗಳಿಂದ ದಿನಕ್ಕೆ ಕನಿಷ್ಠ 10 ಲಕ್ಷ ಲೀಟರ್ ಹಸುವಿನ ಹಾಲು ಉತ್ಪಾದಿಸಬಹುದು. ಅದರಿಂದ 50 ಸಾವಿರ ಕೆಜಿ ಬೆಣ್ಣೆ ತೆಗೆಯಬಹುದು. ನಿತ್ಯ 30 ಸಾವಿರ ಕೆಜಿ ತುಪ್ಪ ಮಾಡಬಹುದು. ಇದರಲ್ಲಿ ಅರ್ಧದಷ್ಟು ತುಪ್ಪವನ್ನು ಸ್ವಾಮಿಯ ಅಗತ್ಯಕ್ಕೆ ಬಳಸಿ ಉಳಿದ ತುಪ್ಪವನ್ನು ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಕಳುಹಿಸಿ ಕಲಬೆರಕೆ ತುಪ್ಪದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಿರುಪತಿ ವಿಶ್ವವಿಖ್ಯಾತ ಆಧ್ಯಾತ್ಮಿಕ ಕೇಂದ್ರ. ಇದು ರಾಜಕೀಯ ಪುನರ್ವಸತಿ ಕೇಂದ್ರವಾಗಬಾರದು. ವ್ಯಾಪಾರದ ಅರಮನೆಯೂ ಆಗಬಾರದು. ಕಾರ್ಪೊರೇಟ್ ಲಾಬಿಯ ನೆಲೆಯಾಗಲು ಬಿಡಲೇಬಾರದು. ಟಿಟಿಡಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಆಧ್ಯಾತ್ಮಿಕ ಶಿಕ್ಷಕರು ಮತ್ತು ಧಾರ್ಮಿಕ ಪ್ರತಿನಿಧಿಗಳು ಇರಬೇಕು. ರಾಜಕೀಯ, ಕೈಗಾರಿಕೆ ಮತ್ತು ಕಾರ್ಪೊರೇಟ್ ವಲಯದ ವ್ಯಕ್ತಿಗಳಿಗೆ ಜಾಗವಿರಬಾರದು. ಕಳೆದ ಐದು ವರ್ಷದಲ್ಲಿ ಅರಾಜಕತೆ ತಾಂಡವವಾಡಿದೆ. ಮಲಿನಗೊಂಡಿರುವ ತಿಮ್ಮಪ್ಪನ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ’ ಎಂದು ರಾಮಚಂದ್ರಯಾದವ್ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net