

ಹೈದರಾಬಾದ್: ರಸ್ತೆಯಲ್ಲಿ ಸ್ಕೂಟರ್ ಮೇಲೆ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನ ಸವಿನಿದ್ದೆಗೆ ಪೊಲೀಸರು ಭಂಗ ಉಂಟುಮಾಡಿದ ಘಟನೆ ಹೈದರಾಬಾದಿನ ಮಧುಪುರದಲ್ಲಿ ಮಂಗಳವಾರ (ಅ. 27) ನಡೆದಿದೆ.
ಹೈದರಾಬಾದಿನ ಎಲ್ಲಂಬಂಡ ಏರಿಯಾ ನಿವಾಸಿ ಹಾಗೂ ಆಫೀಸ್ ಬಾಯ್ ಆಗಿ ಕೆಲಸ ಮಾಡುವ ಸತ್ಯನಾರಾಯಣ ಎಂಬುವರು ನಡು ರಸ್ತೆಯಲ್ಲೇ ಸ್ಕೂಟರ್ ನಿಲ್ಲಿಸಿ ನಿದ್ದೆಗೆ ಜಾರಿದ್ದರು. ಗಾಚಿಬೌಲಿಯಲ್ಲಿರುವ ಐಸಿಐಸಿಐ ಬ್ಯಾಂಕ್ನಿಂದ ಆಗಮಿಸುತ್ತಿದ್ದ ಸತ್ಯನಾರಾಯಣ, ಮಾದಕ ಸ್ಥಿತಿಯಲ್ಲಿದ್ದರಿಂದ ಐಕೆಇಎ (IKEA) ಅಂಡರ್ಪಾಸ್ ಬಳಿ ರಸ್ತೆ ಮಧ್ಯೆಯೇ ತನ್ನ ಹೋಂಡ ಆ್ಯಕ್ಟೀವಾ ನಿಲ್ಲಿಸಿ ನಿದ್ದೆ ಮಾಡುತ್ತಿದ್ದರು.
ಇದಕ್ಕೂ ಮುನ್ನ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದನ್ನು ಮಧುಪುರ ಸಂಚಾರಿ ಪೊಲೀಸರು ಸಿಸಿಟಿವಿ ಮೂಲಕ ಗಮನಿಸಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸ್ಕೂಟರ್ ಮೇಲೆ ಮಲಗಿದ್ದ ಸತ್ಯಾನಾರಾಯಣರನ್ನು ಎಚ್ಚರಿಸಿ, ಡ್ರಂಕ್ ಆ್ಯಂಡ್ ಡ್ರೈವ್ ಪರಿಶೀಲಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿ 334 ಮಿಲಿ ಗ್ರಾಂ ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೇ ಡ್ರಂಕ್ ಆ್ಯಂಡ್ ಡ್ರೈವ್ ಮಾಡಿದ ಆತನ ವಿರುದ್ಧ ಕೇಸು ದಾಖಲಸಿಕೊಳ್ಳಲಾಗಿದೆ. ವಾಹನ ಮತ್ತು ಸತ್ಯನಾರಾಯಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸತ್ಯನಾರಾಯಣ ಅವರು ಸ್ಕೂಟರ್ ಮೇಲೆ ಮಲಗಿದ್ದ ಫೋಟೋವನ್ನು ಸೈಬರಬಾದ್ ಸಂಚಾರಿ ಪೊಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಸಂಭವನೀಯ ರಸ್ತೆ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಲಾಗುತ್ತದೆ. ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಮಲಗಿರುವುದನ್ನು ಸೈಬರಬಾದ್ ಟ್ರಾಫಿಕ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸಿಸಿಟಿವಿಯಲ್ಲಿ ಪರಿಶೀಲಿಸಿತು ಮತ್ತು ಮಧುಪುರ ಪೊಲೀಸರಿಗೆ ಎಚ್ಚರಿಸಿತು ಎಂದು ಹೇಳಿದೆ. (ಏಜೆನ್ಸೀಸ್)