ಟೆನ್ಷನ್ ಬಿಡಿ, ಪರೀಕ್ಷೆ ಬರೆಯಿರಿ: ಎರಡೇ ಪ್ರಶ್ನೆಪತ್ರಿಕೆಗಳಲ್ಲಿ 6 ವಿಷಯಗಳು; ಉತ್ತರಕ್ಕೆ ಒಎಂಆರ್ ಶೀಟ್ ಬಳಕೆ

SSLC
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ವಿದ್ಯಾರ್ಥಿನಿಯ ಮನೆಗೆ ಶನಿವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಆಗಸ್ಟ್​ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
Published on

ಸೋಮವಾರ (ಜು.19) ರಾಜ್ಯಾದ್ಯಂತ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಲಿದ್ದು, ಪ್ರೌಢಶಿಕ್ಷಣ ಮಂಡಳಿ ಅಗತ್ಯ ಸಿದ್ಧತೆಯೊಂದಿಗೆ ಸಜ್ಜಾಗಿದೆ. ವಿದ್ಯಾರ್ಥಿಗಳೂ ಟೆನ್ಷನ್ ಬಿಟ್ಟು ಪರೀಕ್ಷೆ ಎದುರಿಸುವುದಕ್ಕೆ ಪೂರಕ ಮಾಹಿತಿ ಇಲ್ಲಿದೆ.

ಎರಡೇ ಪತ್ರಿಕೆ, 2 ದಿನ ಪರೀಕ್ಷೆ: ಪ್ರತಿ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಒಂದು ವಾರಕ್ಕೂ ಹೆಚ್ಚಿನ ಕಾಲ ನಡೆಯುತ್ತಿತ್ತು. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಆರು ಪತ್ರಿಕೆಗಳನ್ನು 2 ಪ್ರಶ್ನೆ ಪತ್ರಿಕೆಗಳಾಗಿ ಪರಿವರ್ತಿಸಿ ಒಎಂಆರ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಎರಡು ದಿನ ಎರಡು ಪರೀಕ್ಷೆಗಳು ಬರೆದರೆ ಸಾಕು.

ಅಂಕ ನೀಡಿಕೆ ಹೀಗೆ..: ಕೋರ್ ವಿಷಯಗಳ ಪ್ರತಿ ವಿಷಯಕ್ಕೆ 40 ಬಹು ಆಯ್ಕೆಯ ಪ್ರಶ್ನೆಗಳಿಗೆ 80 ಅಂಕಗಳಿರುತ್ತವೆ. ಭಾಷಾ ವಿಷಯಗಳ ಪ್ರಥಮ ಭಾಷೆಗೆ 40 ಬಹು ಆಯ್ಕೆಯ ಪ್ರತಿ ಪ್ರಶ್ನೆಗೆ ಎರಡೂವರೆ ಅಂಕಗಳಿರುತ್ತವೆ. ಇನ್ನುಳಿದ ದ್ವಿತೀಯ ಭಾಷೆಗೆ 80 ಮತ್ತು ತೃತೀಯ ಭಾಷೆಗೆ 80 ಅಂಕಗಳಿರುತ್ತವೆ. ಮೊದಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ ಈಗಲೂ ಒಟ್ಟು 625 ಅಂಕಗಳಿರುತ್ತವೆ.

ಭಯಪಡುವುದು ಬೇಡ: ಪಾಸು, ಪೇಲ್ ಭಯವಿಲ್ಲದೆಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಆ ವಿದ್ಯಾರ್ಥಿಗಳು ಮುಂದೆ ಆಗಸ್ಟ್​ನಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಿದ್ದು, ಆ ವೇಳೆ ಹಾಜರಾಗಬಹುದಾಗಿದೆ.

ಮೂರು ಕಲರ್ ಕೋಡ್: 19ರಂದು ನಡೆಯಲಿರುವ ಕೋರ್ ವಿಷಯಗಳ ಪರೀಕ್ಷೆಗಳಲ್ಲಿ ಗಣಿತ ವಿಷಯಕ್ಕೆ ಗುಲಾಬಿ, ವಿಜ್ಞಾನಕ್ಕೆ ಕಿತ್ತಳೆ ಹಾಗೂ ಸಮಾಜ ವಿಜ್ಞಾನಕ್ಕೆ ಹಸಿರು ಕಲರ್ ಒಎಂಆರ್ ಶೀಟ್ ಬರುತ್ತದೆ. ರೀತಿ ಜು. 22ರಂದು ನಡೆಯುವ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ಪ್ರಥಮ ಭಾಷೆಗೆ ಪಿಂಕ್, ದ್ವಿತೀಯ ಭಾಷೆಗೆ ಆರೆಂಜ್ ಮತ್ತು ತೃತೀಯ ಭಾಷೆಗೆ ಗ್ರೀನ್ ಒಎಂಆರ್ ಶೀಟ್ ಬರುತ್ತದೆ. 40 ಅಂಕದ ಬಹು ಆಯ್ಕೆ ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಇವುಗಳಲ್ಲಿ ಬರುವ ಉತ್ತರದ ವೃತ್ತಾಕಾರವನ್ನು ನೀಲಿ ಅಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್​ನಿಂದ (ಶೇಡ್)ತುಂಬಬೇಕು. ಅನವಶ್ಯಕವಾಗಿ ಶೀಟ್​ನಲ್ಲಿ ಗೀಚು ಹಾಕುವುದಾಗಲಿ ಅಥವಾ ಶೇಡ್ ಮಾಡಬಾರದು. ಒಎಂಆರ್ ಶೀಟ್ ಮೌಲ್ಯಮಾಪನವನ್ನು ಯಂತ್ರಗಳೇ ಮಾಡುವುದರಿಂದ ಬೇಗ ಫಲಿತಾಂಶ ಪಡೆಯಬಹುದು.

ಪರೀಕ್ಷಾ ಸಿದ್ಧತೆ ಪೂರ್ಣ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಕ್ಕಳು ತಮ್ಮ ಶಾಲೆಗಳಿಂದ ಪರೀಕ್ಷಾ ಪ್ರವೇಶಪತ್ರಗಳನ್ನು ಪಡೆದುಕೊಂಡು ಪರೀಕ್ಷೆಗೆ ಹಾಜರಾಗಲು ಉತ್ಸುಕರಾಗಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು. ಈ ಬಾರಿಯ ಪರೀಕ್ಷೆಗೆ ಕಳೆದ ಬಾರಿಗಿಂತ ಹೆಚ್ಚಿನ ಸಿದ್ಧತೆಗಳನ್ನು ಮಾಡಲಾಗಿದೆ. ರಾಜ್ಯದ 14,929 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ಆಯಾ ಮುಖ್ಯೋಪಾಧ್ಯಾಯರು ಮಂಡಳಿಯ ಜಾಲತಾಣದ ಮೂಲಕ ಡೌನ್​ಲೋಡ್ ಮಾಡಿಕೊಂಡಿದ್ದಾರೆ ಎಂದರು.

ಪರೀಕ್ಷೆ ನಡೆಯುವ ಸಮಯ: ಪರೀಕ್ಷೆ ಬೆ.10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಜು.19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜು.22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯದ ಪರೀಕ್ಷೆಗಳು ನಡೆಯಲಿವೆ.

ಬಗೆಹರಿಯದ ಪ್ರವೇಶಪತ್ರ ಸಮಸ್ಯೆ: ರಾಜ್ಯದಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಈ ಪೈಕಿ ಎಷ್ಟು ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿದ್ದಾರೆ? ಎಷ್ಟು ಜನ ಮಾಡಿಲ್ಲ ಎಂಬ ಮಾಹಿತಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಳಿ ಇಲ್ಲ. ಪ್ರವೇಶಪತ್ರ ಸಂಬಂಧ ಮಂಡಳಿಯು 12 ದೂರುಗಳನ್ನು ಸ್ವೀಕರಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ 150 ದೂರುಗಳು ಬಂದಿದ್ದು, ಅದನ್ನು ಇತ್ಯರ್ಥ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ನಿಖರವಾದ ಮಾಹಿತಿ ಮಂಡಳಿಯ ಬಳಿ ಇಲ್ಲ.

ವಿದ್ಯಾರ್ಥಿಗಳಿಗೆ ಆತಂಕ ಬೇಡ. ಸರ್ಕಾರ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಬರೆಯಲು ಮುಂದೆ ಬರಬೇಕು.| ಎಸ್.ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಎಸ್ಸೆಸ್ಸೆಲ್ಸಿ ಜೀವನದಲ್ಲಿ ಪ್ರಮುಖ ಘಟ್ಟ. ನಮಗೆ ಪರೀಕ್ಷೆ ಅವಶ್ಯವಾಗಿ ಬೇಕಿತ್ತು. ಸರ್ಕಾರ ಪರೀಕ್ಷೆ ನಡೆಸುತ್ತಿರುವುದು ಖುಷಿ ಸಂಗತಿ. ಕರೊನಾ ಕಡಿಮೆಯಾದ ನಂತರ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸುತ್ತಿರುವುದರಿಂದ ಯಾವುದೆ ಭಯವಿಲ್ಲದೆ ಪರೀಕ್ಷೆ ಎದುರಿಸಬಹುದು. ಉತ್ತಮ ಅಂಕಗಳನ್ನು ಪಡೆದು ಮುಂದೆ ವೃತ್ತಿಪರ ಕೋರ್ಸ್ ಮಾಡಬಹುದು.| ರಕ್ಷಿತಾ ಜಂಬಗಿ ಹುನಗುಂದ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net