ನಿಗೂಢವಾಗಿ ಸತ್ತ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಚಿನ್ನಾಭರಣ ಪತ್ತೆ: ಶಾಕಿಂಗ್​ ಸಂಗತಿ ಬಯಲು! Tiger

Tiger
Published on

Tiger : ಸತ್ತ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು ಮತ್ತು ಚಿನ್ನಾಭರಣ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ ಶಾಕಿಂಗ್​ ಸಂಗತಿಗಳು ಬೆಳಕಿಗೆ ಬಂದಿವೆ.

ಕೇರಳದ ವಯನಾಡಿನ ನಿವಾಸಿ ರಾಧಾ ಅವರನ್ನು ಕೆಲವು ದಿನಗಳ ಹಿಂದೆ ಹುಲಿ ಕೊಂದಿತ್ತು. ಹುಲಿ ಆಕೆಯ ದೇಹದ ಕೆಲವು ಭಾಗಗಳನ್ನು ತಿಂದು ಹಾಕಿದೆ ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ಕೇರಳ ಸರ್ಕಾರ ಹುಲಿಯನ್ನು ಜೀವಂತವಾಗಿ ಹಿಡಿಯಲು ಅಥವಾ ಗುಂಡಿಕ್ಕಿ ಕೊಲ್ಲಲು ಅನುಮತಿ ನೀಡಿತು.

ಪಿಲಕಾವು ಬಳಿಯ ಮುಂತಿ ರಸ್ತೆ ಸ್ಥಳದಲ್ಲಿ ನಿನ್ನೆ (ಜ.27) ಬೆಳಗಿನ ಜಾವ 12.30 ಕ್ಕೆ ಹುಲಿ ಮೊದಲು ಕಾಣಿಸಿಕೊಂಡಿತು. ಡಾ. ಅರುಣ್ ಜಕಾರಿಯಾ ನೇತೃತ್ವದ ಕಾರ್ಯಪಡೆ ಟ್ರ್ಯಾಂಕ್ವಿಲೈಜರ್ ಗನ್ ಬಳಸಿ ಹುಲಿಯನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಆದರೆ, ತಪ್ಪಿಸಿಕೊಂಡಿತು. ಇದಾದ ನಂತರ, ಬೆಳಗಿನ ಜಾವ 2.30 ರ ಸುಮಾರಿಗೆ, ಮತ್ತೆ ಹುಲಿ ಪತ್ತೆಯಾಯಿತು. ಈ ವೇಳೆ ಕಾರ್ಯಪಡೆ ಅದನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಈ ಮಧ್ಯೆ, ಹುಲಿ ದುರ್ಬಲ ಸ್ಥಿತಿಯಲ್ಲಿರುವುದನ್ನು ತಂಡ ಗಮನಿಸಿತು. ಇದಾದ ಸ್ವಲ್ಪ ಹೊತ್ತಲ್ಲೇ ಹೊಲವೊಂದರಲ್ಲಿ ಅದು ಸತ್ತಿರುವುದು ಕಂಡುಬಂತು.

ಹುಲಿಯ ದೇಹವನ್ನು ಹೊರತೆಗೆದು ಪಶುವೈದ್ಯರ ಸಹಾಯದಿಂದ ಶವಪರೀಕ್ಷೆಗೆ ಕಳುಹಿಸಿದರು. ಶವಪರೀಕ್ಷೆಯ ವರದಿಯಲ್ಲಿ ಹುಲಿಯ ಕುತ್ತಿಗೆಯ ಮೇಲೆ ಕೆಲವು ಗಾಯಗಳಾಗಿರುವುದು ತಿಳಿದುಬಂದಿದೆ. ಇದಲ್ಲದೆ, ಹುಲಿಯ ಹೊಟ್ಟೆಯೊಳಗೆ ಮಹಿಳೆಯ ಕೂದಲಿನ ತುಂಡುಗಳು, ಆಭರಣಗಳು ಮತ್ತು ಆಕೆಯ ಅಂಗಿಯ ಮೇಲಿನ ಗುಂಡಿಯೂ ಇತ್ತು.

ಕಾಡಿನಲ್ಲಿ ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿದ್ದರಿಂದ ಮಹಿಳೆಯ ಮೇಲೆ ದಾಳಿ ಮಾಡಿ, ಕೊಂದು ತಿಂದು ಹಾಕಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶವಪರೀಕ್ಷೆಯ ಫಲಿತಾಂಶಗಳು ಬಂದ ನಂತರವೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ನರಭಕ್ಷಕ ಹುಲಿಯು ಸಾವಿಗೂ ಹಿಂದಿನ ದಿನ ಒಳನಾಡಿನ ಕಾಡಿನಲ್ಲಿ ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಗಾಯಗೊಂಡಿತ್ತು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net