

ರಾಜ್ಯಾದ್ಯಂತ ಹುಲಿಯುಗುರು ಸಂಬಂಧಿತ ಪ್ರಕರಣಗಳು ತೀವ್ರ ಸಂಚಲನ ಮೂಡಿಸಿವೆ. ಚರ್ಚೆಗೂ ಗ್ರಾಸವಾಗಿವೆ. ವನ್ಯಜೀವಿಗಳ ಅಂಗಾಂಗ ಮತ್ತು ವನ್ಯಸಂಪತ್ತನ್ನು ಅಕ್ರಮವಾಗಿ ಹೊಂದಿದ್ದವರೆಲ್ಲ ಈಗ ಪೊಲೀಸ್ ಅತಿಥಿಗಳಾಗುತ್ತಿದ್ದಾರೆ. ರಾಜ್ಯಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ಹಲವರು ಭಯಬಿದ್ದು ತಮ್ಮ ಬಳಿಯಿದ್ದ ವನ್ಯಜೀವಿ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸುತ್ತಿದ್ದಾರೆ. ಈ ಮಧ್ಯೆ, ವನ್ಯಜೀವಿಗಳ ನಕಲಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಭಾರಿ ಜಾಲವೂ ದೇಶಾದ್ಯಂತ ಕಾರ್ಯಾಚರಿಸುತ್ತಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಬಗ್ಗೆ ಜನಸಾಮಾನ್ಯರಲ್ಲಿ ಸೂಕ್ತ ಅರಿವು, ಮಾಹಿತಿ ಇಲ್ಲದಿರುವುದು ಕೂಡ ಇತ್ತೀಚಿನ ಪ್ರಕರಣಗಳಿಂದ ಸ್ಪಷ್ಟವಾಗಿದೆ. ಅಲ್ಲದೆ, ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಗೊಂದಲಕ್ಕೆ ಕಾರಣವಾಗಿದ್ದು, ಚರ್ಚೆ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಧರ್ಮದ ಸ್ವರೂಪವನ್ನೂ ಪಡೆಯುತ್ತಿದೆ. ಬಹುತೇಕ ಎಲ್ಲ ಧರ್ಮದವರು ಧಾರ್ವಿುಕ ನಂಬಿಕೆಗಳ ಮತ್ತು ಪರಂಪರೆಗಳ ಭಾಗವಾಗಿ ಕೆಲ ವನ್ಯಜೀವಿಗಳ ವಸ್ತುಗಳನ್ನು ಬಳಕೆ ಮಾಡುವುದು ರೂಢಿಯಾಗಿ ಬಂದಿದೆ. ಅದು ಇಂದು-ನಿನ್ನೆ ಆರಂಭವಾದದ್ದೇನಲ್ಲ ಎಂಬುದು ಗೊತ್ತಿರುವಂಥದ್ದೇ. ಹೀಗಿರುವಾಗ, ಹುಲಿಯುಗರಿನ ಪ್ರಕರಣದ ಬಳಿಕ ಅಧಿಕಾರಿಗಳು ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇಷ್ಟು ವರ್ಷಗಳ ಕಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾನೂನಿನ ಬಗ್ಗೆ ಅರಿವು ಮೂಡಿಸದೆ, ಈಗ ಏಕಾಏಕಿ ಕ್ರಮಕ್ಕೆ ಮುಂದಾಗಿರುವುದೇಕೆ? ಇದರ ಹಿಂದೆ ವನ್ಯಜೀವಿ ಸಂರಕ್ಷಣೆಯ ಆಶಯಕ್ಕಿಂತ ಬೇರೆ ಉದ್ದೇಶ ಅಡಗಿದೆಯೆ? ಕಾಯ್ದೆಯ ಹೆಸರಲ್ಲಿ ಜನರಿಗೆ ತೊಂದರೆ ಉಂಟುಮಾಡುವುದು ಎಷ್ಟು ಸರಿ? ಎಂಬೆಲ್ಲ ಪ್ರಶ್ನೆಗಳು ಈಗ ಉದ್ಭವವಾಗಿವೆ. ಇಂಥ ಪ್ರಕರಣಗಳಲ್ಲಿ ಸರ್ಕಾರ ಪ್ರತಿಷ್ಠಿತರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಸನಾತನ ಧರ್ಮದ ನಂಬಿಕೆಗಳಿಗೆ ಪೆಟ್ಟು ನೀಡಲು, ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಂದು ವಾದ. ಈ ಗೊಂದಲದ ಲಾಭ ಪಡೆದು ಹೊಸ ಬಗೆಯ ಸಂಘರ್ಷ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು.
ರಾಜ್ಯದಲ್ಲಿ ಬರದ ಪರಸ್ಥಿತಿ ತೀವ್ರವಾಗಿದೆ. ಬರಪರಿಹಾರದ ಕೆಲಸಗಳು ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ನಿಂತುಹೋಗಿವೆ. ಶಾಸಕರಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಈ ಎಲ್ಲ ಗಂಭೀರ ಸಮಸ್ಯೆಗಳಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಸರ್ಕಾರ ಈ ಬಗೆಯ ತಂತ್ರಗಳನ್ನು ಹೂಡಿದೆ ಎನ್ನುತ್ತಿವೆ ಪ್ರತಿಪಕ್ಷಗಳು. ಅದೇನಿದ್ದರೂ, ಇಂಥ ಪ್ರಕರಣಗಳನ್ನು ವಿವೇಚನೆಯಿಂದ ನಿರ್ವಹಿಸಿ, ರ್ತಾಕ ಅಂತ್ಯ ಕಲ್ಪಿಸಬೇಕೆ ಹೊರತು, ಬೇರೆ ಆಯಾಮ ಪಡೆದುಕೊಳ್ಳಲು ಬಿಡಬಾರದು. ಈಗಲೂ ಕಾಲ ಮಿಂಚಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಅರಿವು ಮೂಡಿಸುವ ನಿಟ್ಟಿನಲ್ಲಿ ಜನಾಂದೋಲನ ಕೈಗೊಂಡು, ಸ್ಪಷ್ಟತೆ ಒದಗಿಸಬೇಕು. ರಾಜಕೀಯ ಬದಿಗಿಟ್ಟು, ವಾಸ್ತವ ನೆಲೆಯಲ್ಲಿ ಈ ಸೂಕ್ಷ್ಮ ವಿಷಯವನ್ನು ನಿಭಾಯಿಸಬೇಕು.