ಹುಲಿ ಸೆರೆ ಕಾರ್ಯಾಚರಣೆ ಆರಂಭ

IMG-20231206-WA0255
Published on

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಣಸೂರು ವನ್ಯಜೀವಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹುಲಿ ವಿಶೇಷ ಸಂರಕ್ಷಣಾ ಪಡೆ ಶೆಟ್ಟಹಳ್ಳಿ-ನೇಗತ್ತೂರು ಅರಣ್ಯ ಪ್ರದೇಶದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿತು.


ಮಂಗಳವಾರ ಸಂಜೆ ನೇಗತ್ತೂರು ಗ್ರಾಮದ ಲಕ್ಷ್ಮಮ್ಮ ಚಂದ್ರೇಗೌಡ ಅವರ ಎರಡು ಹಸುಗಳ ಮೇಲೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹುಲಿ ಸೆರೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾರಣ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ಕೈಗೊಂಡರು.


ಸಿಸಿ ಕ್ಯಾಮರಾದಲ್ಲಿ ಚಿತ್ರ ಸೆರೆ:ಹುಲಿ ಪತ್ತೆಗೆ ಅರಣ್ಯ ಪ್ರದೇಶದ ಹತ್ತು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರದಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು, ಇದರಿಂದ ಹುಲಿ ಇರುವಿಕೆ ಖಚಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


ಜನರಿಗೆ ಜಾಗೃತಿ: ಹುಲಿಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯಿಂದ ಅರಣ್ಯ ಇಲಾಖೆ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಬುಧವಾರ ನೇಗತ್ತೂರು ಸೇರಿದಂತೆ ಕಾಡಂಚಿನ, ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ಹುಲಿ ಇರುವಿಕೆ ಬಗ್ಗೆ ಮಾಹಿತಿ ನೀಡಿ ಜಾಗರೂಕತೆಯಿಂದ ಇರುವಂತೆ, ರಾತ್ರಿ ವೇಳೆ ಯಾರೂ ಓಡಾಡದಂತೆ ಹಾಗೂ ಜಾನುವಾರುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.


ಇಂದಿನಿಂದ ಸಾಕಾನೆಗಳ ಸಹಾಯದಿಂದ ಕೂಂಬಿಂಗ್: ಮೂರ‌್ನಾಲ್ಕು ದಿನಗಳ ಹಿಂದೆ ನಮ್ಮ ಸಾಕಾನೆಗಳು ಪುಂಡಾನೆಗಳ ಸೆರೆ ಕಾರ್ಯಾಚರಣೆಗಾಗಿ ಹಾಸನ ಜಿಲ್ಲೆಗೆ ತೆರಳಿದ್ದು, ಗುರುವಾರದಿಂದ ಹುಲಿ ಕಾರ್ಯಾಚರಣೆ ಮತ್ತಷ್ಟು ಚುರುಕಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ, ಹುಲಿ ವಿಶೇಷ ಸಂರಕ್ಷಣಾ ದಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net