ಇನ್ನೊಂದೆಡೆ, ಈ ಬಾರಿಯ ಮುಂಗಾರು ಪ್ರವೇಶದ ಹಾದಿಯಲ್ಲಿ ಮಹತ್ವದ ಹವಾಮಾನ ಬದಲಾವಣೆಗಳು ಕಂಡುಬಂದಿವೆ. ನೈಋತ್ಯ ಮುಂಗಾರು ಈಗಾಗಲೇ ಅಂಡಮಾನ್ ದ್ವೀಪಗಳನ್ನು ತಲುಪಿದ್ದರೂ ಸಹ, ಮೇ 17ರಿಂದ ಹಿಂದೂಮಹಾಸಾಗರದ ಮೂಲಕ ಸಾಗಿ ಬರಬೇಕಾದ ಮುಂಗಾರು ಮಾರುತಗಳು ದುರ್ಬಲಗೊಳ್ಳುವ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿವೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಂತಹ ಪ್ರಕ್ರಿಯೆಗಳಿಂದಾಗಿ ಮುಂಗಾರು ಮಾರುತಗಳ ತೀವ್ರತೆ ಕಡಿಮೆಯಾಗುತ್ತಿದ್ದು, ಇದು ರಾಜ್ಯಕ್ಕೆ ಮುಂಗಾರು ಮಾರುತಗಳ ಸಾಗಣೆಯ ವೇಗವನ್ನು ಕುಂಠಿತಗೊಳಿಸಿದೆ. ಇದರ ನೇರ ಪರಿಣಾಮವಾಗಿ, ಕರ್ನಾಟಕ ರಾಜ್ಯಕ್ಕೆ ಮುಂಗಾರು ನಿಗದಿತ ಅವಧಿಯಲ್ಲಿ ಪ್ರವೇಶಿಸುವ ಸಾಧ್ಯತೆಗಳು ತೀರಾ ಕ್ಷೀಣವಾಗಿವೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.