ಕಮಲ್ ಹಾಸನ್​ 'ಥಗ್​ ಲೈಫ್'ಗೆ ನಷ್ಟದ ಸಂಕಷ್ಟ! ಬರೆ ಮೇಲೆ ಮತ್ತೊಂದು ಬರೆ; 8 ವಾರಕ್ಕೂ ಮುನ್ನವೇ ಒಟಿಟಿಗೆ​ | Thug Life

ವಿಜಯವಾಣಿ - 2025-06-26T140022.254
Published on

Thug Life: ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಕೇವಲ ಅವರಿಗೆ ಮಾತ್ರವಲ್ಲದೇ ಅವರು ಅಭಿನಯದ ಚಿತ್ರಕ್ಕೂ ಭಾರೀ ಮುಖಭಂಗವನ್ನೇ ಉಂಟುಮಾಡಿತು ಎಂಬುದಕ್ಕೆ ಥಗ್​ ಲೈಫ್ ಹೀನಾಯ ​ಸೋಲೇ ಜ್ವಲಂತ ಸಾಕ್ಷಿ. ಚಿತ್ರಮಂದಿರಗಳಲ್ಲಿ ತೆರೆಕಂಡು 8 ವಾರಗಳನ್ನೂ ಪೂರೈಸದ ಚಿತ್ರ ಇದೀಗ ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್ ಆದ ನೆಟ್​ಫ್ಲಿಕ್ಸ್​ನಲ್ಲಿ​ ರಿಲೀಸ್ ಆಗ್ತಿರುವ ವಿಚಾರ ಸದ್ಯ ಚಿತ್ರತಂಡಕ್ಕೆ ಮತ್ತೊಂದು ಆಘಾತ ತಂದೊಡ್ಡಿದೆ.

'ಫ್ಲಾಪ್​' ಹಣೆಪಟ್ಟಿ

37 ವರ್ಷಗಳ ಬಳಿಕ ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್​ನಲ್ಲಿ ಮೂಡಿಬಂದ 'ಥಗ್ ಲೈಫ್​' ಖಂಡಿತ ಸೂಪರ್​ ಹಿಟ್​ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ದೊಡ್ಡ ವಿವಾದ ಹಾಗೂ ಚಿತ್ರದಲ್ಲಿ ಮನರಂಜನಾ ಅಂಶಗಳಿಲ್ಲದ ಕಾರಣ ಥಗ್​ ಲೈಫ್​ ಸದ್ಯ ಸಿನಿರಸಿಕರ ಮೆಚ್ಚುಗೆ, ಪ್ರಶಂಸೆಯಿಂದ ದೂರ ಉಳಿದು ಫ್ಲಾಪ್ ಎಂಬ​ ಹಣೆಪಟ್ಟಿ ಹೊತ್ತು ತಿರುಗುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲು ಅನುಭವಿಸಿದ ಬಹುನಿರೀಕ್ಷಿತ ಚಿತ್ರದ ಕುರಿತು ಇಲ್ಲಿಯವರೆಗೆ ಎಲ್ಲಿಯೂ ಮಾತನಾಡದ ಮಣಿರತ್ನಂ, ಇತ್ತೀಚೆಗಷ್ಟೇ ಈ ಕುರಿತಂತೆ ಮೌನ ಮುರಿದರು.

130 ಕೋಟಿ ರೂ.ಗೆ ಬೇಡಿಕೆ

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರಿಲ್ಲದೆ ಭಾರೀ ಮುಖಭಂಗ ಅನುಭವಿಸಿದ 'ಥಗ್​ ಲೈಫ್'​, ಇದೀಗ ಬಾಕ್ಸ್​ ಆಫೀಸ್​ನಲ್ಲಿ ಭಾರೀ ನಷ್ಟವನ್ನು ಎದುರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ ಮೊರೆ ಹೋದ ಚಿತ್ರತಂಡ, ತಮ್ಮ ಚಿತ್ರವನ್ನು ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲು ಮುಂದಾಯಿತು. ಇದಕ್ಕಾಗಿ ಮಾತುಕತೆ ಕೂಡ ನಡೆಸಿತು. ಆದರೆ, ಮೊದಲ ಹಂತದ ಮಾತುಕತೆ ಗಿಟ್ಟಲಿಲ್ಲ. 130 ಕೋಟಿ ರೂ. ಕೊಟ್ಟು ಖರೀದಿಸಲು ನೆಟ್​ಫ್ಲಿಕ್ಸ್​ ಒಪ್ಪಲಿಲ್ಲ. ರಿಲೀಸ್ ಆಗಿ 8 ವಾರಗಳು ಸಹ ಕಳೆದಿಲ್ಲ. ಆಗಲೇ ಒಟಿಟಿಗೆ ಏಕೆ ಎಂದು ಒಟಿಟಿ ಸಂಸ್ಥೆ ಪ್ರಶ್ನಿಸಿತು. ಇದಕ್ಕೆ ಸೋಲು ಬಿಟ್ಟರೆ ಬೇರೇನೂ ಇಲ್ಲ ಎಂಬುದು ಸ್ಪಷ್ಟ ಉತ್ತರವಾಗಿತ್ತು.

ನೆಟ್​ಫ್ಲಿಕ್ಸ್​ಗೆ 'ಥಗ್​ ಲೈಫ್'​

ಬಿಡುಗಡೆಗೂ ಮುನ್ನ ಚಿತ್ರದ ಮೌಲ್ಯ 130 ಕೋಟಿ ರೂ. ಎಂದು ನಿಗದಿಯಾಗಿತ್ತು. ಆದರೆ, ಕಳಪೆ ಪ್ರದರ್ಶನ, ಅತಿ ಕಡಿಮೆ ರೇಟಿಂಗ್ ಮತ್ತು 8 ವಾರಗಳಿಗೂ ಮೊದಲೇ ರಿಲೀಸ್​ಗೆ ಒತ್ತಾಯಿಸಿದ ಹಿನ್ನೆಲೆ ನೆಟ್‌ಫ್ಲಿಕ್ಸ್ ಥಗ್​ ಲೈಫ್​ಗೆ 90 ಕೋಟಿ ರೂ. ಕೊಡುವುದಾಗಿ ಮರು ಮಾತುಕತೆಯಲ್ಲಿ ತಿಳಿಸಿತ್ತು. ಆದರೆ, ಅಂತಿಮವಾಗಿ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ 110 ಕೋಟಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸಿನಿ ವರದಿಗಳು ಸ್ಪಷ್ಟಪಡಿಸಿವೆ.

25 ಲಕ್ಷ ರೂ. ದಂಡ!

ಮತ್ತೊಂದೆಡೆ ತೆರೆಕಂಡು 8 ವಾರಗಳನ್ನೂ ಪೂರೈಸದ ಚಿತ್ರಕ್ಕೆ ಮಲ್ಟಿಪ್ಲೆಕ್ಸ್​ಗಳು ಛೀಮಾರಿ ಹಾಕಿವೆ. ಈ ನಿಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ರೂಢಿಯಿದೆ. ಥಗ್ ಲೈಫ್ ಸಮಯವು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರಿಂದ, ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಗ್ರೂಪ್​ಗಳು ನಿರ್ಮಾಪಕರಿಗೆ 25 ಲಕ್ಷ ರೂ. ದಂಡ ವಿಧಿಸಿವೆ. ಒಪ್ಪಂದ ರದ್ದಾಗಿರುವುದರಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು 25 ಲಕ್ಷ ರೂ. ದಂಡ ವಿಧಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ನಿಟ್ಟಿನಲ್ಲಿ ಚಿತ್ರಕ್ಕೆ ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ಹೊಡೆತಗಳು ಬೀಳುತ್ತಲೇ ಇವೆ. ಈ ವಿಷಯ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net