ನಗರದಲ್ಲಿ ಬಾಧಿಸುತ್ತಿದೆ ಗಂಟಲು ಬೇನೆ

Gantalu Bene
Published on

ಬೆಂಗಳೂರು: ಕರೊನಾ ವೈರಸ್ ಭೀತಿಯ ಜತೆಗೆ ಬಿಸಿಲಿನ ತೀವ್ರತೆ, ಧೂಳು ಮತ್ತು ಶುಷ್ಕ ವಾತಾವರಣದಿಂದ ನಗರದಲ್ಲಿ ಗಂಟಲುಬೇನೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆಗಳ ಕಿವಿ ಮೂಗು ಗಂಟಲು (ಇಎನ್​ಟಿ) ವಿಭಾಗಕ್ಕೆ ಬರುವ ಹೊರರೋಗಿ ಪೈಕಿ ಶೇ.20ರಿಂದ 30 ಮಂದಿ ಗಂಟಲು ಬೇನೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ವಾಣಿವಿಲಾಸ ಆಸ್ಪತ್ರೆಗಳಲ್ಲಿ ನಿತ್ಯ 10ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿದ್ದು, ಎಲ್ಲ ವಯೋಮಾನದವರನ್ನೂ ಈ ಬೇನೆ ಬಾಧಿಸುತ್ತಿದೆ.

ವಿವಿಧ ಕಾರಣಗಳಿಗೆ ಮನೆಯಿಂದ ಹೊರ ಹೋಗುವ ಮಂದಿ ಬಿಸಿಲ ಝುಳಕ್ಕೆ ಬಳಲಿ ಬಾಯಾರಿಕೆ ನೀಗಿಸಿಕೊಳ್ಳಲು ತಂಪುಪಾನೀಯ, ಕಬ್ಬಿನಹಾಲು, ಮಜ್ಜಿಗೆ, ಐಸ್ಕ್ರೀಂ, ಹಣ್ಣು, ದ್ರವ ಆಹಾರಗಳ ಮೊರೆ ಹೋಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡದ ಕಾರಣ ಗಂಟಲು ಬೇನೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಅರೆತಲೆನೋವು ಸಮಸ್ಯೆ ಇರುವವರು ತಣ್ಣನೆಯ ಪದಾರ್ಥ ಸೇವಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.

ರೋಗ ಲಕ್ಷಣ: ಆರಂಭದಲ್ಲಿ ಗಂಟಲು ಕಟ್ಟಿದಂತಾಗಿ, ಕಿವಿಯ ಕೆಳಭಾಗದಿಂದ ಗಂಟಲು ನೋವು, ಕೆರೆತ ಕಾಣಿಸಿಕೊಳ್ಳುತ್ತದೆ. ಬಳಿಕ ಒಣಕೆಮ್ಮು, ನೆಗಡಿ, ತಲೆನೋವು, ಮೈ-ಕೈ ನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆದರೂ ಒಂದು ವಾರ ಕಾಡಲಿದೆ. ಆದ್ದರಿಂದ ಜನರು ಗಂಟಲ ಬೇನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ತಜ್ಞರ ಸಲಹೆ.

ಸ್ಟ್ರಾ ಬಳಸಬೇಡಿ: ಎಳನೀರು, ಜ್ಯೂಸ್, ಮಜ್ಜಿಗೆ ಇನ್ನಿತರ ತಂಪುಪಾನೀಯ ಸೇವಿಸುವಾಗ ಬಹುತೇಕರು ಸ್ಟ್ರಾ ಬಳಸುತ್ತಾರೆ. ಆದರೆ, ಇದೂ ಅಪಾಯಕಾರಿ. ಕೊಳವೆಯಂತಹ ಸ್ಟ್ರಾನಲ್ಲಿ ಅತೀ ಸೂಕ್ಷ್ಮವಾದ ಧೂಳಿನ ಕಣಗಳು ಸೇರಿರುತ್ತವೆ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದ್ದು, ಅದರ ಬಳಕೆಯಿಂದ ಗಂಟಲು ಸೋಂಕು ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೇರವಾಗಿ ಪಾನೀಯಗಳ ಸೇವನೆ ಮಾಡುವುದು ಒಳಿತು.

ಬೇಸಿಗೆಯಲ್ಲಿ ಗಂಟಲು ಸಮಸ್ಯೆ ಸಾಮಾನ್ಯ. ಆದರೆ, ಇದೇ ವೇಳೆ ಕರೊನಾ ಭೀತಿ ಎದುರಾಗಿರುವುದರಿಂದ ಸಣ್ಣಪುಟ್ಟ ಸಮಸ್ಯೆಗೂ ಆತಂಕಗೊಂಡು ಚಿಕಿತ್ಸೆಗೆ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಕೌನ್ಸೆಲಿಂಗ್ ಮಾಡಿ ಚಿಕಿತ್ಸೆ ನೀಡಿ ಕಳುಹಿಸಲಾಗುತ್ತಿದೆ. | ಡಾ. ರಮೇಶ ಕೆ. ಕೌಲಗುಡ್ ಇಎನ್​ಟಿ ವಿಭಾಗ ಮುಖ್ಯಸ್ಥರು, ಕೆ.ಸಿ. ಜನರಲ್ ಆಸ್ಪತ್ರೆ

ಇವನ್ನು ಪಾಲಿಸಿ

  • ಬಿಸಿಲ ತಾಪಕ್ಕೆ ದ್ರವಾಹಾರ ಸೇವನೆ ಹೆಚ್ಚಿರಲಿ
  • ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ
  • ಹೊರಗಿನ ಆಹಾರ ಸೇವನೆ ಬಗ್ಗೆ ಎಚ್ಚರವಿರಲಿ
  • ಮಧುಮೇಹಿಗಳು ಹಾಗೂ ರೋಗಿಗಳು ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ಗಂಜಿ, ನೀರು ಸೇವಿಸುವುದು ಉತ್ತಮ.
  • ಆಹಾರ ಸೇವಿಸುವ ಮುನ್ನ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಿ
  • ಬೀದಿಬದಿ ಮಾರುವ ಸೌತೆಕಾಯಿ, ಹಣ್ಣುಗಳನ್ನು ಸೇವಿಸುವಾಗ ಎಚ್ಚರ ಅಗತ್ಯ
  • ಡೀಹೈಡ್ರೇಷನ್​ನಿಂದ ಪಾರಾಗಲು ಒಆರ್​ಎಸ್, ಎಲೆಕ್ಟ್ರಾಲ್ ಸೇವಿಸಿ
  • ಶುದ್ಧ ಹಾಗೂ ಬಿಸಿ ಊಟ ಸೇವನೆಗೆ ಹೆಚ್ಚು ಆದ್ಯತೆ ನೀಡುವುದು ಸೂಕ್ತ
  • ಋತುಮಾನದ ಹಣ್ಣುಗಳನ್ನು (ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ ಇತ್ಯಾದಿ) ಯಥೇಚ್ಛವಾಗಿ ಬಳಸಿ.
  • ಹೊರಗೆ ಹೋಗುವಾಗ ಕುಡಿಯುವ ನೀರನ್ನೂ ಜತೆಯಲ್ಲಿ ಕೊಂಡೊಯ್ಯಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net