ಒಂದೇ ದಿನ ಮೂವರು ಯುವತಿಯರು ನಾಪತ್ತೆ: ಒಂದೊಂದು ಪ್ರಕರಣವೂ ವಿಚಿತ್ರ, ಪಾಲಕರಲ್ಲಿ ಆತಂಕ!

girls Missing
Published on

ಹೈದರಾಬಾದ್​: ಒಂದೇ ದಿನ ಮೂವರು ಯುವತಿಯರು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಪಾಲಕರನ್ನು ಆತಂಕಕ್ಕೆ ದೂಡಿದೆ. ಮೂವರು ಸಹ ಸಿಕಂದರಬಾದ್​ನ ಬೇರೆ ಬೇರೆ ಏರಿಯಾದವರಾಗಿದ್ದು, ಮನೆ ಬಿಟ್ಟಿದ್ದ ಯುವತಿಯರು ಮರಳಿ ಬಾರದಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದ್ದು, ನಾಪತ್ತೆ ಪ್ರಕರಣ ದಾಖಲಾಗಿದೆ.

ಚಿಲಕಲಗುಡ, ತಿರುಮಲಗಿರಿ ಮತ್ತು ಲಾಲಗುಡ ಪೊಲೀಸ್​ ಠಾಣೆಗಳಲ್ಲಿ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಶೋಧ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದ್ದಾರೆ.

ಚಿಲಕಲಗುಡದ ಶ್ರೀನಿವಾಸ್​ ನಗರ ಕಾಲನಿ ನಿವಾಸಿ ಬಂಡಾರಿ ರೋಹಿಣಿ (19) ಅಮೀರ್​ಪೇಟ್​ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ. ಬುಧವಾರ ರಾತ್ರಿ ಪಾಲಕರ ಜತೆಯಲ್ಲಿ ಮಲಗಿದ್ದ ರೋಹಿಣಿ ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದಾಳೆ. ಅಲ್ಲದೆ, ರೋಹಿಣಿಯ ಬಟ್ಟೆಗಳು ಮತ್ತು ಆಭರಣಗಳು ಸಹ ನಾಪತ್ತೆಯಾಗಿವೆ. ರೋಹಿಣಿ ತಂದೆ ಜಗದೀಶ್ವರ ರಾವ್​ ಅವರು ಮಗಳು ಕಾಣೆಯಾಗಿರುವ ಬಗ್ಗೆ ಚಿಲಕಲಗುಡ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಲಾಲಗುಡದ ನಿವಾಸಿ ಶ್ರೀಧರ್​ ಮಗಳಾದ ಕೀರ್ತಿ ಪ್ರಗ್ಯಾ (20) ಗುರುವಾರ ಬೆಳಗ್ಗೆ ಮನೆಯಿಂದ ಹೊರಟು ಸಂಜೆಯಾದರೂ ಮರಳಿ ಬರಲೇ ಇಲ್ಲ. ಫೋನ್​ ಸಹ ಸ್ವಿಚ್​ ಆಫ್​ ಆಗಿದ್ದು, ಗಾಬರಿಗೊಂಡ ಪಾಲಕರು ಲಾಲಗುಡ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಿರುಮಲಗಿರಿಯ ಶಾಲೆಯಲ್ಲಿ ರಿಸೆಪ್ಶನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ಮಂಜುಳಾ (20) ಸಹ ಗುರುವಾರ ಕಾಣೆಯಾಗಿದ್ದಾರೆ. ಗುರುವಾರ ಶಾಲೆಗೆ ಹೋದ ಮಂಜುಳಾ ತನ್ನ ಸಹೋದ್ಯೋಗಿಗಳ ಕೈಗೆ ಪತ್ರವೊಂದನ್ನು ಕೊಟ್ಟು ಮನೆಯವರಿಗೆ ಕೊಟ್ಟುಬಿಡಿ ಎಂದಿದ್ದಾಳೆ. ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಶಾಲೆಗೆ ಮಗಳನ್ನು ಹುಡುಕಿಕೊಂಡು ಹೋದ ಪಾಲಕರಿಗೆ ಸಹೋದ್ಯೋಗಿಗಳು ಪತ್ರವನ್ನು ಕೊಟ್ಟಿದ್ದಾರೆ.

ಪತ್ರದಲ್ಲಿ ನನಗೆ ಮನೆಯಲ್ಲಿಯೇ ಇರಬೇಕೆಂದು ಅನಿಸುವುದಿಲ್ಲ ಎಂದು ಮಂಜುಳಾ ಬರೆದಿದ್ದಾಳೆ. ಇದಾದ ತಕ್ಷಣವೇ ಆಕೆಯ ಪಾಲಕರು ತಿರುಮಲಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಒಂದೇ ದಿನ ಮೂವರು ಯುವತಿಯರು ನಾಪತ್ತೆಯಾಗಿರುವುದು ಹೈದರಾಬಾದ್​ನಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿದೆ. ಬೆಳೆದ ಮಕ್ಕಳು ಕಾಣೆಯಾಗಿರುವುದರಿಂದ ಪಾಲಕರಲ್ಲಿ ಭಯ ಹೆಚ್ಚಾಗಿದ್ದು, ಮಕ್ಕಳಿಗೆ ಏನಾಗಿದೆ? ಎಲ್ಲಿಗೆ ಹೋಗಿದ್ದಾರೆ? ಸುರಕ್ಷಿತವಾಗಿದ್ದಾರಾ? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net