

ಧಾರವಾಡ: ಇತ್ತೀಚೆಗೆ ರಾಜ್ಯದ ಅಲ್ಲಲ್ಲಿ ಮಕ್ಕಳ ಕಳ್ಳರ ವಿಷಯ ಕೇಳಿ ಬರುತ್ತಿದ್ದು, ಇಂದು ಧಾರವಾಡ ಜಿಲ್ಲಾಸ್ಪತ್ರೆಯಲ್ಲೂ ಒಮ್ಮೆ ಮಕ್ಕಳ ಕಳ್ಳರ ಆತಂಕ ಉಂಟಾಗಿತ್ತು. ಮೂರು ವರ್ಷದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದ್ದು, ಆಕೆಯ ತಾಯಿ ಗೋಳೋ ಎಂದು ಅತ್ತುಕರೆದು ರಂಪ ಮಾಡಿದ್ದೂ ಆಗಿದೆ. ಕೊನೆಯಲ್ಲಿ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಹೆರಿಗೆಯಾಗಿದ್ದ ತಂಗಿಯನ್ನು ನೋಡಲು ಮುಸ್ಕಾನ್ ಎಂಬಾಕೆ ತನ್ನ ಮೂರು ವರ್ಷದ ಮಗಳ ಜತೆ ಧಾರವಾಡ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದಳು. ಆದರೆ ಕೆಲವೇ ಹೊತ್ತಿನಲ್ಲಿ ಮಗಳು ಕಾಣೆಯಾಗಿದ್ದು, ತಾಯಿ ಗೋಳೋ ಎಂದು ಅತ್ತು ಕರೆದು ರಂಪ ಮಾಡಿದ್ದರಿಂದ ಆಸ್ಪತ್ರೆಯಲ್ಲಿ ಒಂದು ರೀತಿಯಲ್ಲಿ ಹೈಡ್ರಾಮಾ ಸೃಷ್ಟಿಯಾದಂತಾಗಿತ್ತು.
ಆದರೆ ಬಾಲಕಿಯೊಬ್ಬಳು ಆಸ್ಪತ್ರೆಯಿಂದ ಹೊರಗೆ ಹೋಗಿದ್ದನ್ನು ಆಸ್ಪತ್ರೆ ಹೊರಗಿದ್ದ ಸ್ಥಳೀಯ ವ್ಯಾಪಾರಿಯೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೇರೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಶಿವಾಜಿ ವೃತ್ತದ ಬಳಿ ಬಾಲಕಿ ಸಿಕ್ಕಿದ್ದಾಳೆ. ಪಾಲಕರ ನಿರ್ಲಕ್ಷ್ಯದಿಂದಾಗಿ ಬಾಲಕಿ ತಪ್ಪಿಸಿಕೊಂಡು ಹೊರಗೆ ಹೋಗಿದ್ದು, ಗಮನ ಹರಿಸದ ತಾಯಿ ತಕ್ಷಣ ಹುಡುಕಾಟ ನಡೆಸದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು.