

ನವದೆಹಲಿ: ಟ್ರಾಫಿಕ್ ರೂಲ್ಸ್ ಪಾಲಿಸದಿದ್ರೆ ದಂಡ ಬೀಳುತ್ತೆ. ಆದ್ದರಿಂದ ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಲೆಬೇಕು. ದಂಡ ಪಾವತಿಸುವ ಬದಲು ಪೊಲೀಸರು ಲಂಚ ಕೇಳುತ್ತಾರೆ ಎಂದು ಜನರು ಆರೋಪಿಸುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಲಂಚ ಪಡೆದ ಹಣವನ್ನು ಮೂವರು ಪೊಲೀಸರು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ರಾಷ್ಟ್ರರಾಜಧಾನಿಯ ಗಾಜಿಪುರದಲ್ಲಿ ಈ ಪ್ರಕರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಚೇಕ್ಪೋಸ್ಟ್ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಟ್ರಾಫಿಕ್ ಪೊಲೀಸ್ ವಾದ ಮಾಡುತ್ತಾರೆ. ಬಳಿಕ ಸ್ವಲ್ಪ ಸಮಯದ ನಂತರ ಪೊಲೀಸ್ ಅಧಿಕಾರಿಯು ತನ್ನ ಹಿಂದಿನ ಮೇಜಿನ ಮೇಲೆ ಹಣ ಇಟ್ಟು ಹೋಗುವಂತೆ ಸೂಚಿಸುತ್ತಾರೆ. ವ್ಯಕ್ತಿಯೊಬ್ಬ ಹಣವಿಟ್ಟು ಹೋದ ಬಳಿಕ ಪೊಲೀಸ್ ಕುಳಿತುಕೊಂಡು ಹಣವನ್ನು ಎಣಿಸುತ್ತಾನೆ. ಬಳಿಕ ಮೂವರು ಪೊಲೀಸ್ ಅಧಿಕಾರಿಗಳು ಲಂಚವನ್ನು ಹಂಚಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿರುವ ಇಬ್ಬರು ಸಹಾಯಕ ಸಬ್ಇನ್ಸ್ಪೆಕ್ಟರ್ ಹಾಗೂ ಓರ್ವ ಹೆಡ್ ಕಾನ್ಸ್ಟೇಬಲ್ನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಸಮಗ್ರ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್)